ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆಯೇ ರಾಜ್ಯದ ವಿವಿಧ ಜಿಲ್ಲೆಯ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಳಗಾವಿ, ಬಾಗಲಕೋಟೆ, ರಾಯಚೂರು ಹಾಗೂ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಳಗಾವಿ ನಗರದ ಅನಗೋಳದಲ್ಲಿರುವ, ಬೆಳಗಾವಿ ಪ್ರಭಾರಿ ಸಬ್ ರಿಜಿಸ್ಟರ್ ಸಚಿನ್ ಮಂಡೇದ್ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮನೆ, ಕಚೇರಿ ಸೇರಿದಂತೆ ಸಚಿನ್ ಮಂಡೇದ್ಗೆ ಸಂಬಂಧಿಸಿದ 3 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಇನ್ನು ಬೆಳಗಾವಿ ಜಿಲ್ಲೆಯ ಹಾರೂಗೇರಿ ವೆಟರ್ನರಿ ಇನ್ಸ್ಪೆಕ್ಟರ್ ಸಂಜಯ್ ಎನ್ನುವವರ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಸಂಜಯ್ ನಿವಾಸದ ಮೇಲೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.
ಬೆಂಗಳೂರಿನಲ್ಲಿಯೂ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದ್ದು, ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗದ ಎಇಇ ಮಾಧವ ರಾವ್ ಎನ್ನುವವರ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.