ಚನ್ನಪಟ್ಟಣ : “ಕಣ್ವ ಅಣೆಕಟ್ಟು ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಮಾಡುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಮತದಾರರಿಗೆ “ಕೃತಜ್ಞತಾ ಸಮಾವೇಶ” ನಡೆಸಿದ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಣ್ವ ಅಣೆಕಟ್ಟಿಗೆ ಭೇಟಿ ನೀಡಿ ಭಾನುವಾರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸಿ.ಪಿ ಯೋಗೇಶ್ವರ್, ಮಾಜಿ ಸಂಸದ ಡಿ.ಕೆ. ಸುರೇಶ್, ಶಾಸಕರಾದ ಬಾಲಕೃಷ್ಣ, ರಂಗನಾಥ್, ಎನ್ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್.ರವಿ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನಪ್ರತಿನಿಧಿಗಳ ಜತೆ ಮೋಟಾರ್ ಬೋಟ್ ಮೂಲಕ ಕಣ್ವ ಡ್ಯಾಮ್ ನಲ್ಲಿ ವಿಹಾರ ನಡೆಸಿದರು. ಕಣ್ವ ಅಣೆಕಟ್ಟಿನ ಪ್ರದೇಶವನ್ನು ಪ್ರವಾಸೋದ್ಯಮದ ತಾಣವಾಗಿ ರೂಪಿಸಲು ಇರುವ ಅವಕಾಶಗಳ ಕುರಿತು ಚರ್ಚೆ ನಡೆಸಿದರು.
ಜಲ ವಿಹಾರ, ಜಲ ಕ್ರೀಡೆ, ಪಾರ್ಕ್ ನಿರ್ಮಾಣ ಸೇರಿದಂತೆ ಅಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಿದರು.