ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿಂದು 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ (Delhi Election 2025) ನಡೆಯುತ್ತಿದೆ. ಬೆಳ್ಳಂಬೆಳಗ್ಗೆ ಕೊರೆವ ಚಳಿಯನ್ನೂ ಲೆಕ್ಕಿಸದೇ ಮತದಾರರು ಉತ್ಸಾಹದಿಂದಲೇ ಹಕ್ಕು ಚಲಾಯಿಸುತ್ತಿದ್ದಾರೆ.
ಅಂತೆಯೇ ಲೋಕಸಭೆ ವಿಪಕ್ಷ ನಾಯಕರೂ ಆಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು ಬಂದು ಮತ ಚಲಾಯಿಸಿದ್ದಾರೆ. ದೆಹಲಿ ನಿರ್ಮಾಣ ಭವನದ ಮತಗಟ್ಟೆಗೆ ಬಂದು ಮತ ಚಲಾಯಿಸಿ 8:30ರ ವೇಳೆಗೆಲ್ಲಾ ಮತಗಟ್ಟೆಯಿಂದ ತೆರಳಿದ್ದಾರೆ.
ಬಳಿಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್, ಆಪ್ ನಾಯಕ ಮನೀಶ್ ಸಿಸೋಡಿಯಾ, ಸೇರಿದಂತೆ ಅನೇಕ ನಾಯಕರು ಮತ ಚಲಾಯಿಸಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಸಂಜೆ 6:30 ಗಂಟೆವರೆಗೂ ನಡೆಯಲಿದೆ. 1.56 ಕೋಟಿ ಮತದಾರರು ಮತ (Vote) ಚಲಾವಣೆ ಮಾಡಲಿದ್ದಾರೆ. ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಫೆಬ್ರವರಿ 8ಕ್ಕೆ ಫಲಿತಾಂಶ ಹೊರಬೀಳಲಿದೆ
ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ (BJP) ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.