ಬೆಂಗಳೂರು: ದೇಶದ ಜನತೆಯ ಚಿತ್ತ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದತ್ತ ನೆಟ್ಟಿದೆ. ಈ ಕುಂಭ ಮೇಳಕ್ಕೆ ಎರಡು ದಿನಗಳ ಕಾಲ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕುಟುಂಬ ಸಮೇತರವಾಗಿ ತೆರಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಸಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು ಪಾಪ-ಪುಣ್ಯದ ಪ್ರಶ್ನೆ ಎತ್ತಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇದೇ ಫೆಬ್ರವರಿ 9, 10ರಂದು ಪ್ರಯಾಗ್ರಾಜ್ನಲ್ಲಿನ ಮಹಾ ಕುಂಭಮೇದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಆರ್.ಅಶೋಕ್, ಗಂಗೆಯಲ್ಲಿ ಮಿಂದ ತಕ್ಷಣ ಡಿಸಿಎಂ ಡಿಕೆ ಶಿವಕುಮಾರ್ ಅವರ ಪಾಪಗಳೆಲ್ಲ ಕಳೆದುಹೋಗುತ್ತಾ?
ಕುಂಭ ಮೇಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪುಣ್ಯಸ್ನಾನ ಮಾಡಿದ ತಕ್ಷಣ ಕರ್ನಾಟಕದಲ್ಲಿ ಬಡತನ ನಿರ್ಮೂಲನೆ ಆಗುತ್ತಾ?. ಹೀಗಂತ ಈಗ ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಸಾಹೇಬರು ಪ್ರಶ್ನೆ ಮಾಡಲ್ವಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಕುಂಭ ಮೇಳಕ್ಕೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಹೀಗೆ ಪಾಪ-ಪುಣ್ಯಗಳ ಪ್ರಶ್ನೆ ಕೇಳುವ ಮೂಲಕ ಲೇವಡಿ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರು ಫೆಬ್ರವರಿ 09ರಂದು ಬೆಳಗ್ಗೆ ಪ್ರಯಾಗ್ ರಾಜ್ಗೆ ತೆರಳಲಿದ್ದಾರೆ. ಅಲ್ಲಿ ಪೂಜೆ, ಯಮುನಾ, ಸರಸ್ವತಿ ಮತ್ತು ಗಂಗಾ ನದಿಗಳು ಕೂಡಿರುವ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ಈ ಕುರಿತು ಸ್ವತಃ ಉಪಮುಖ್ಯಮಂತ್ರಿಗಳೇ ಮಾತನಾಡಿದ್ದಾರೆ.
ಉತ್ತರ ಪ್ರದೇಶದ ಮಂತ್ರಿಗಳು ನಮಗೆ ಆತ್ಮೀಯರಾಗಿದ್ದು, ಅವರು ನನ್ನನ್ನು ಆಹ್ವಾನಿಸಿದ್ದಾರೆ. ಈ ಕಾರಣದಿಂದ ನಾನು ಮತ್ತು ನನ್ನ ಕುಟುಂಬ ಪರಿವಾರ ಸಮೇತವಾಗಿ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶಕ್ಕೆ ಮುಂದಿನ ವಾರ ತೆರಳಲಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕುಂಭ ಮೇಳಕ್ಕೆ ಪ್ರಧಾನಿ ಮೋದಿ ಭೇಟಿ ಮಹಾಕುಂಭ ಮೇಳ ಜನವರಿ 13ರಿಂದ ಆರಂಭವಾಗಿದ್ದು, ಫೆಬ್ರವರಿ 26ರವರೆಗೆ ನಡೆಯಲಿದೆ. ಮಹಾಕುಂಭ ಮೇಳದಲ್ಲಿ ಈವರೆಗೆ ಸುಮಾರು 40 ಕೋಟಿಯಷ್ಟು ಮಂದಿ ಭೇಟಿ ನೀಡಿದ್ದಾರೆ. ಒಟ್ಟಾರೆ 400-450 ಮಿಲಿಯನ್ ಮಂದಿ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.