ಬೆಂಗಳೂರು; ಬೆಂಗಳೂರಿನಲ್ಲಿ ಪಾರ್ಕಿಂಗ್ ಹಾಗೂ ಪಾರ್ಕಿಂಗ್ ಚಾರ್ಜ್ ದೊಡ್ಡ ಸಮಸ್ಯೆ. ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಒಂದು ಕಡೆಯಾದರೆ ಮತ್ತೊಂದು ಕಡೆ ಪಾರ್ಕಿಂಗ್ ಚಾರ್ಜ್ ಶುಲ್ಕದ ಸಮಸ್ಯೆ ಇದೆ. ಕೆಲವರು ಅನಧಿಕೃತವಾಗಿ ಬೆಂಗಳೂರಿನ ವಿವಿಧ ಭಾಗದಲ್ಲಿ ಪಾರ್ಕಿಂಗ್ ಚಾರ್ಜ್ ಪಡೆಯುವುದು ಮುಂದುವರಿದಿದೆ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಖಡಕ್ ಸೂಚನೆಯೊಂದನ್ನು ಕೊಟ್ಟಿದ್ದಾರೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಹೃದಯ ಭಾಗದಲ್ಲಿ ಪಾರ್ಕಿಂಗ್ ಚಾರ್ಜ್ಗೆ ಬ್ರೇಕ್ ಹಾಕಲಾಗಿದೆ ಅದರ ವಿವರ ಇಲ್ಲಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಮಿತಿ ಮೀರುತ್ತಿದೆ. ಟ್ರಾಫಿಕ್ ಜಾಮ್ ಮಾತ್ರವಲ್ಲ ಇದರಿಂದ ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆಯೂ ಇದೆ. ಕೆಲವು ಕಡೆ ಅನಧಿಕೃತವಾಗಿ ಹಾಗೂ ದುಬಾರಿ ಪಾರ್ಕಿಂಗ್ ಚಾರ್ಜ್ ಹಾಕಲಾಗುತ್ತಿದೆ ಎನ್ನುವ ಆರೋಪಗಳು ಇವೆ. ಇದೀಗ ಈ ರೀತಿ ಅನಧಿಕೃತ ಹಾಗೂ ದುಬಾರಿ ಪಾರ್ಕಿಂಗ್ಗೆ ಬ್ರೇಕ್ ಹಾಕುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.
ಬೆಂಗಳೂರಿನ ಈ ಭಾಗದಲ್ಲಿ ಪಾರ್ಕಿಂಗ್ ಚಾರ್ಜ್ಗೆ ಬ್ರೇಕ್: ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಪೇ & ಪಾರ್ಕಿಂಗ್ ಟೆಂಡರ್ ಮುಗಿದಿದೆ. ಆದರೆ ಕೆಲವರು ಅನಧಿಕೃತವಾಗಿ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ವಿಚಾರದಲ್ಲಿ ಬಿಬಿಎಂಪಿ ಅಲರ್ಟ್ ಆಗಿದೆ. ಈ ಭಾಗದಲ್ಲಿ ಟೆಂಡರ್ ಕರೆಯುವವರೆಗೂ ಯಾವುದೇ ವಾಹನಗಳಿಂದ ಪಾರ್ಕಿಂಗ್ ಚಾರ್ಜ್ ಪಡೆಯುವಂತಿಲ್ಲ. ಒಂದೊಮ್ಮೆ ಯಾರಾದರೂ ಪಡೆಯುತ್ತಿದ್ದಾರೆ ಎನ್ನುವುದು ಗೊತ್ತಾದರೆ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಅನಧಿಕೃತ ಪಾರ್ಕಿಂಗ್ ಚಾರ್ಜ್ಗೆ ಕಡಿವಾಣ ಹಾಕುವುದಾಗಿ ಹೇಳಿದೆ.
ಗಡಿ ಫಿಕ್ಸ್ ಮಾಡಲು ಸೂಚನೆ: ಇನ್ನು ಬೆಂಗಳೂರಿನಲ್ಲಿ ಬಿಬಿಎಂಪಿಯಲ್ಲಿ ವಾರ್ಡ್ಗಳ ಸಂಖ್ಯೆ ಹೆಚ್ಚಾಗಿದೆ. ಯಾವ ವಾರ್ಡ್ಗೆ ಹೋಗಿ ಸಮಸ್ಯೆಗಳನ್ನು ಹೇಳಿಕೊಳ್ಳಬೇಕೆಂದು ಜನರಿಗೆ ತಿಳಿಯುತ್ತಿಲ್ಲ. ಈ ಸಮಸ್ಯೆಯನ್ನು ತಪ್ಪಿಸುವುದಕ್ಕೆ ಗಡಿ ನಿರ್ಮಾಣ ಮಾಡಬೇಕು ಎಂದು ಜನ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಡಿ ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪೌರಕಾರ್ಮಿಕರ ವಿಶ್ರಾಂತಿಗಾಗಿ 42 ಕಡೆ ಶಾಶ್ವತ ಕೊಠಡಿಗಳ ನಿರ್ಮಾಣವನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸಹ ಸೂಚನೆ ಕೊಡಲಾಗಿದೆ. ನಗರದಲ್ಲಿ ಪೌರಕಾರ್ಮಿಕರು ವಿಶ್ರಾಂತಿ ತೆಗೆದುಕೊಳ್ಳಲು 42 ಕಡೆ ಶಾಶ್ವತ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಿ ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡಲು ಸೂಚನೆ ನೀಡಲಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.