ಬೆಂಗಳೂರು: ಇಂದಿನಿಂದ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಇಂಡಿಯಾ-2025 (ಏರ್ಶೋ) ಆರಂಭವಾಗಿದೆ. ವಿವಿಧ ರಾಷ್ಟ್ರಗಳ ಲೋಹದ ಹಕ್ಕಿಗಳು ಸಿಲಿಕಾನ್ ಸಿಟಿಯ ಬಾನಂಗಳದಲ್ಲಿ ಮೈಮಾಟ ಪ್ರದರ್ಶಿಸಲು ಸಜ್ಜಾಗಿವೆ. ಆದರೆ ಈ ಜಾಗತಿಕ ಕಾರ್ಯಕ್ರಮದಲ್ಲಿ ಅಪಸ್ವರವೊಂದು ಕೇಳಿಬಂದಿದೆ. ಏರ್ಶೋ ಡ್ಯೂಟಿ ಮಾಡುತ್ತಿದ್ದ ಪೊಲೀಸರಿಗೆ ನೀಡಿದ ಆಹಾರದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಏರ್ಶೋ ಡ್ಯೂಟಿಗಾಗಿ ಹಲವು ಪೊಲೀಸ್ ಸಿಬ್ಬಂದಿಯನ್ನು ಯಲಹಂಕ ವಾಯುನೆಲೆಯ ಬಳಿ ನಿಯೋಜಿಸಲಾಗಿದೆ. ಕರ್ತವ್ಯನಿರತರಿಗೆ ಅಲ್ಲಿಂದಲೇ ಆಹಾರದ ವ್ಯವಸ್ಥೆ ಕೂಡ ಮಾಡಲಾಗಿದೆ. ಏರ್ಶೋ ಭದ್ರತೆಗಾಗಿ ಕಳೆದ ಕೆಲವು ದಿನಗಳಿಂದಲೂ ಅಲ್ಲೇ ಡ್ಯೂಟಿ ಮಾಡುತ್ತಿದ್ದಾರೆ. ಈ ಹಿನ್ನೆಲೆ ಅವರಿಗೆ ವಿತರಿಸಿರುವ ಆಹಾರದಲ್ಲಿ ಜಿರಳೆ ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದ ಹಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಪೊಲೀಸ್ ಇಲಾಖೆಯು ಬಂದೋಬಸ್ತ್ ಸಿಬ್ಬಂದಿಗೆ ಗುಣಮಟ್ಟದ ಆಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದೆ. ಆದರೆ, ತುಂಬಾ ಚೆನ್ನಾಗಿ ಪ್ಯಾಕ್ ಆಗಿ ಬಂದ ಆಹಾರದಲ್ಲಿ ಜಿರಳೆ ಪತ್ತೆಯಾಗಿದೆ. ನಿನ್ನೆ ಆಹಾರ ಸೇವಿಸುವಾಗ ಜಿರಳೆ ಕಂಡು ಸಿಬ್ಬಂದಿ ಶಾಕ್ ಆಗಿದ್ದಾರೆ. ಊಟದಲ್ಲಿ ಜಿರಳೆ ಇರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಈ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಏರ್ಶೋ ಜಾಗತಿಕ ಕಾರ್ಯಕ್ರಮ. ಅಲ್ಲಿಗೆ ದೇಶ ವಿದೇಶಗಳಿಂದ ಗಣ್ಯರು, ಅತಿಥಿಗಳು ಬರುತ್ತಾರೆ. ಇಂತಹ ಕಾರ್ಯಕ್ರಮ ಭದ್ರತೆ ವಹಿಸಿದ ಪೊಲೀಸರಿಗೆ ಇಂತಹ ಕೆಟ್ಟ ಆಹಾರವನ್ನಾ ನೀಡೋದು? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ದೊಡ್ಡ ಕಾರ್ಯಕ್ರಮದಲ್ಲಿ ಈ ರೀತಿಯ ಅವ್ಯವಸ್ಥೆ ಇದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಇದು ಕರ್ತವ್ಯದಲ್ಲಿರುವ ಪೊಲೀಸರಿಗೆ ಮಾಡುತ್ತಿರುವ ದೊಡ್ಡ ಅವಮಾನ ಎಂದು ಹೇಳಿದ್ದಾರೆ.
ಆದರೆ, ಪೊಲೀಸರಿಗೆ ಯಾರಿಂದ ಈ ಆಹಾರ ಪೂರೈಕೆಯಾಗಿದೆ ಎಂಬುದರ ಮಾಹಿತಿ ಇಲ್ಲ. ಏರ್ಶೋ ಕಾರ್ಯಕ್ರಮವನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ಇಂತಹ ಕಾರ್ಯಕ್ರಮದಲ್ಲಿ ಒಳ್ಳೆಯ ಆಹಾರ ವ್ಯವಸ್ಥೆ ಇಲ್ಲ ಎನ್ನುವುದು ಗೊತ್ತಾದರೆ ಬೇರೆ ದೇಶಗಳ ಮುಂದೆ ನಾವೇ ತಲೆತಗ್ಗಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ. ಪೊಲೀಸರು ಏರ್ಶೋ ವೇಳೆ ಜನರು ಹಾಗೂ ವಾಹನಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ, ದಿನವಿಡೀ ಅವರು ದಣಿದಿರುತ್ತಾರೆ. ಅವರಿಗೆ ಈ ರೀತಿಯ ಜಿರಳೆ ಆಹಾರ ನೀಡಿ ಅವಮಾನ ಮಾಡಬೇಡಿ ಎಂದು ಹೇಳಿದ್ದಾರೆ.
ದೇಶದ ಬೃಹತ್ ವೈಮಾನಿಕ ಪ್ರದರ್ಶನವಾದ ಏರೋ ಇಂಡಿಯಾ-2025 ಇಂದಿನಿಂದ ಆರಂಭವಾಗಿದ್ದು, ಯಲಹಂಕದಲ್ಲಿರುವ ವಾಯುನೆಲೆಯಲ್ಲಿ ಪ್ರದರ್ಶನಕ್ಕೆ ಎಲ್ಲ ಸಿದ್ಧತೆ ಮಾಡಲಾಗಿದೆ. ಇಂದು ಏರೋ ಇಂಡಿಯಾ ಉದ್ಘಾಟನಾ ಕಾರ್ಯಕ್ರಮ ಹಾಗೂ ವೈಮಾನಿಕ ಪ್ರದರ್ಶನ ವಿಚಾರ ಸಂಕಿರಣ ಇರಲಿದೆ. ನಾಳೆ ಯುದ್ಧ ವಿಮಾನಗಳ ಪ್ರದರ್ಶನ ಹಾಗೂ ವಿವಿಧ ದೇಶಗಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ರಕ್ಷಣಾ ಸಚಿವರ ಸಭೆ ಸಿಇಒಗಳ ಸಭೆ ನಡೆಯಲಿದೆ. ಫೆಬ್ರವರಿ 12ರಂದು ಸಿಇಒ ನವೋದ್ಯಮಿ ಮತ್ತು ಉದ್ಯಮಿಗಳ ಮುಖಾಮುಖಿ ವಿಚಾರ ಸಂಕಿರಣ ಹಾಗೂ ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ನಡೆಯಲಿದೆ.