ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿನಿತ್ಯ ರೌಡಿಗಳ ಪುಂಡಾಟ ಹೆಚ್ಚಾಗಿದೆ. ರಸ್ತೆಯಲ್ಲಿನ ಸಿಕ್ಕ ಸಿಕ್ಕ ಜನಸಾಮಾನ್ಯರು, ವ್ಯಾಪಾರಿಗಳು, ದುಡಿಯುವ ಕಾರ್ಮಿಕರ ಮೇಲೆ ಭೀಕರವಾಗಿ ಮಾರಣಾಂತಿಕ ಹಲ್ಲೆಯನ್ನು ಮಾಡಿ ಪರಾರಿ ಆಗುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಇದೀಗ ಬೆಂಗಳೂರಿನ ಇಂದಿರಾನಗರ ಹೋಟೆಲ್ ಒಂದರಲ್ಲಿ ರೌಡಿಶೀಟರ್ ನಾಲ್ಕೈದು ಜನರಿಗೆ ಚೂರಿ ಇರಿದು ಪರಾರಿಯಾಗಿದ್ದಾನೆ.
ಇಂದಿರಾನಗರದಲ್ಲಿ ರೌಡಿ ಶೀಟರ್ ಒಬ್ಬ ಸಿಕ್ಕ ಸಿಕ್ಕವರ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಆತಂಕ ಮೂಡಿಸಿದ್ದಾನೆ. ಬೆಂಗಳೂರಿನ ಇಂದಿರಾನಗರ ಹೋಟೆಲ್ ಒಂದರಲ್ಲಿ ರೌಡಿಶೀಟರ್ ಕದಂಬ ಎನ್ನುವವನು ಮೂರ್ನಾಲ್ಕು ಮಂದಿ ಮೇಲೆ ಏಕಾಏಕಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೋಟೆಲ್ನ ಸಿಸಿಟಿವಿಯಲ್ಲಿ ಆರೋಪಿ ಓಡಿ ಹೋಗುವ ದೃಶ್ಯ ಸೆರೆಯಾಗಿದೆ.
ಶನಿವಾರ ರಾತ್ರಿಯಿಂದ ಐದು ಗಂಟೆಗಳಲ್ಲಿ ನಾಲ್ವರ ಮೇಲೆ ದಾಳಿ ನಡೆಸಲಾಗಿದೆ. ಹಲ್ಲೆಗೊಳಗಾದ ನಾಲ್ವರ ಪೈಕಿ ಇಬ್ಬರು ಪಾನಿ ಪುರಿ ಮಾರಾಟಗಾರರಾಗಿದ್ದರೆ, ಉಳಿದ ಇಬ್ಬರು ಲಿಫ್ಟ್ ನೀಡಲು ನಿರಾಕರಿಸಿದ ಹಿನ್ನೆಲೆ ದಾಳಿಗೊಳಗಾಗಿದ್ದಾರೆ. ನಾಲ್ವರೂ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಮೂರು ಕೊಲೆ ಯತ್ನ ಪ್ರಕರಣಗಳು ಮತ್ತು ದರೋಡೆ ಪ್ರಕರಣ ದಾಖಲಿಸಿದ್ದಾರೆ. ನಾಲ್ವರ ಮೇಲೆ ದಾಳಿ ನಡೆಸಿರುವ ಆರೋಪಿಯನ್ನು ಭಿನ್ನಮಂಗಲ ನಿವಾಸಿ ಕದಂಬ ಎಂದು ಗುರುತಿಸಲಾಗಿದೆ. ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ರೌಡಿ ಅಟ್ಟಹಾಸ ಪ್ರಕರಣದ ಕುರಿತು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಅವರು ಮಾತನಾಡಿ, ಇದೇ ತಿಂಗಳ ಎಂಟನೇ ತಾರೀಖು ಇಂದಿರಾನಗರದ ಹಳೇ ಬೆನ್ನಮಂಗಲದಲ್ಲಿ ಘಟನೆ ನಡೆದಿತ್ತು. ಓರ್ವ ವ್ಯಕ್ತಿ ಪಾನಿಪುರಿ ಆರ್ಡರ್ ಮಾಡಿದ್ದ.. ಈ ವೇಳೆ ಸ್ಕ್ಯಾನಿಂಗ್ ವೇಳೆ ಮಾತುಕತೆ ಆಗಿರುತ್ತೆದೆ, ಈ ವೇಳೆ ಆ ವ್ಯಕ್ತಿ ಬೈತಿರ್ತಾನೆ. ಪಾನಿ ಪುರಿ ಅಂಗಡಿಯವ ಯಾಕೆ ಅಂತಾ ಪ್ರಶ್ನೆ ಮಾಡಿರ್ತಾನೆ. ಆಗ ಚಾಕುವಿನಿಂದ ಇರಿದು ಹಲ್ಲೆ ಮಾಡಿರುತ್ತಾನೆ ಎಂದು ತಿಳಿಸಿದ್ದಾರೆ.
ಅದಾದಮೇಲೆ ಮತ್ತೊಂದು ಪಾನಿಪುರಿ ಅಂಗಡಿಯವನು ಪುರಿ ಇಲ್ಲ. ಪಾನಿ ಮಾತ್ರ ಇಲ್ಲ ಎಂದಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ನಂತರ ಓರ್ವ ವ್ಯಕ್ತಿಯಿಂದ ಬೈಕ್ ನಲ್ಲಿ ಡ್ರಾಪ್ ತೆಗೆದುಕೊಂಡಿದ್ದಾನೆ. ಆಗ ಅತಾನ ಕತ್ತಿನ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಅದರ ನಂತರ ಮೆಡಿಕಲ್ ಗೆ ಹೋಗ್ತಿದ್ದ ಓರ್ವ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡ್ತಾನೆ. ನಂತರ ಮತ್ತೆ ಓರ್ವ ವ್ಯಕ್ತಿಯಿಂದ ಡ್ರಾಪ್ ತೆಗೆದುಕೊಂಡು ಆತನ ಬಳಿ ಸುಲಿಗೆ ಮಾಡ್ತಾನೆ. ನಂತರ ಕೆ.ಆರ್ ಪುರಂ ಕಡೆ ಹೋಗ್ತಿರೋ ಮಾಹಿತಿ ಬರುತ್ತದೆ ಎಂದು ತಿಳಿಸಿದರು.
ಆರೋಪಿ ಹೆಸರು ಕದಂಬ. ಈ ಮುಂಚೆ ಮೊಬೈಲ್ ರಾಬರಿ ಕೇಸ್ ಗಳಿವೆ. ಇಂದಿರಾನಗರ ಠಾಣೆಯಲ್ಲಿ ರೌಡಿಶೀಟ್ ಓಪನ್ ಮಾಡಲಾಗಿದೆ, ಅಲ್ಲದೇ ಯಾವ ಕೃತ್ಯದಲ್ಲಿ ಭಾಗಿಯಾಗದಂತೆ ಈ ಹಿಂದೆ ಬಾಂಡ್ ಕೂಡ ಬರೆಸಿಕೊಳ್ಳಾಗಿತ್ತು. ಆದರೆ, ಕುಡಿತಕ್ಕೆ ಹಣ ಕೊಡುವಂತೆ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ. ನಂತರ ಹೊರ ಬಂದು ಈ ರೀತಿಯ ಕೃತ್ಯಗಳನ್ನ ಎಸಗಿದ್ದಾನೆ. ಆತ ಯಾವ ಸೀರಿಯಲ್ ಕಿಲ್ಲರ್ ಅಲ್ಲವೇ ಅಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವುದು ಸುದ್ಧಿ ಸುಳ್ಳು. ಸದ್ಯ ಆತನ ವಿರುದ್ದ ಕೊಲೆ ಯತ್ನ ಪ್ರಕರಣಗಳನ್ನ ದಾಖಲು ಮಾಡಲಾಗಿದೆ.