ಮೈಸೂರು: “ಮೈಸೂರಲ್ಲಿ ಮದುವೆ ಆಗಬೇಕೆಂಬುದು ನನ್ನ ಕನಸು. ಹೀಗಾಗಿ ನನಗೆ ತುಂಬಾ ಕನೆಕ್ಟ್ ಆಗಿರುವ ಇಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ” ಎಂದು ನಟ ಡಾಲಿ ಧನಂಜಯ್ ತಿಳಿಸಿದರು.
ಫೆ.15 ಮತ್ತು 16ರಂದು ನಗರದ ವಸ್ತು ಪ್ರದರ್ಶನ ಆವರಣದಲ್ಲಿ ನಡೆಯಲಿರುವ ತಮ್ಮ ಮದುವೆ ಸಿದ್ಧತೆ ಪರಿಶೀಲಿಸಿದ ಬಳಿಕ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
“ನನ್ನ ಶಿಕ್ಷಣ, ಬದುಕು, ಚಿತ್ರರಂಗ ಪ್ರವೇಶ ಎಲ್ಲವೂ ಆಗಿದ್ದು ಮೈಸೂರಿನಲ್ಲೇ. ಹೀಗಾಗಿ ನಾನು ಮೈಸೂರಿನೊಂದಿಗೆ ತುಂಬಾ ಕನೆಕ್ಟ್ ಆಗಿದ್ದೇನೆ. ನನ್ನ ಬದುಕಿನ ಎಲ್ಲವೂ ಮೈಸೂರಿನಿಂದಲೇ ಶುರುವಾಗಿದ್ದರಿಂದ ವೈವಾಹಿಕ ಜೀವನವೂ ಇಲ್ಲಿಂದಲೇ ಆರಂಭವಾಗಲಿ ಎಂದು ಇಲ್ಲೇ ಮದುವೆಯಾಗುತ್ತಿದ್ದೇನೆ” ಎಂದರು.
“ಮಂತ್ರ ಮಾಂಗಲ್ಯ, ರಿಜಿಸ್ಟರ್ ಮ್ಯಾರೇಜ್ ಮೂಲಕ ಸರಳ ವಿವಾಹವಾಗಬೇಕೆಂಬ ಆಸೆಯಿತ್ತು. ಸಂಬಂಧಿಕರು, ಸ್ನೇಹಿಕರು, ಚಿತ್ರರಂಗದವರು, ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಊಟ ಹಾಕಿಸುವುದು ಕಷ್ಟ ಸಾಧ್ಯ. ಹೀಗಾಗಿ ಅಭಿಮಾನಿಗಳು, ಸಂಬಂಧಿಕರ ಖುಷಿಗೆ ಎಲ್ಲರಿಗೂ ಒಂದೇ ಕಡೆ ಊಟ ಹಾಕಿಸಲು ಇಲ್ಲಿ ಮದುವೆ ಆಗುತ್ತಿದ್ದೇನೆ. ಎಲ್ಲರೂ ಬಂದು ಆಶೀರ್ವಾದ ಮಾಡಿ” ಎಂದು ಅವರು ಆಹ್ವಾನಿಸಿದರು.