ಬೆಳಗಾವಿ || 8 ತಿಂಗಳ ಹಿಂದೆ ಸೀಜ್ ಮಾಡಿ ಹರಾಜಿಗಿಟ್ಟಿದ್ದ ಮನೆ ಬಿಡಿಸಿಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ || 8 ತಿಂಗಳ ಹಿಂದೆ ಸೀಜ್ ಮಾಡಿ ಹರಾಜಿಗಿಟ್ಟಿದ್ದ ಮನೆ ಬಿಡಿಸಿಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ :  ಖಾಸಗಿ ಫೈನಾನ್ಸ್ ಸಂಸ್ಥೆಯವರು 8 ತಿಂಗಳ ಹಿಂದೆ ಸೀಜ್ ಮಾಡಿ ಹರಾಜಿಗಿಟ್ಟಿದ್ದ ಮನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಿಡಿಸಿಕೊಟ್ಟಿದ್ದಾರೆ.

ವಾಗ್ವಾಡೆ ಗ್ರಾಮದ ಅಂಬೇಡ್ಕರ್ ಗಲ್ಲಿಯ ಸುರೇಶ ಗೀರಪ್ಪ ಕಾಂಬಳೆ ಫೈನಾನ್ಸ್ ಒಂದರಿಂದ 2020ರಲ್ಲಿ 7 ಲಕ್ಷ ರೂ. ಸಾಲ ಪಡೆದಿದ್ದರು. ಬಹುತೇಕ ಹಣ ಪಾವತಿಸಿದ್ದರು. ಆರ್ಥಿಕ ಸಮಸ್ಯಯಿಂದಾಗಿ ಇನ್ನೂ 2.50 ಲಕ್ಷ ರೂ. ತುಂಬುವುದು ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ  8 ತಿಂಗಳ  ಹಿಂದೆ ಕುಟುಂಬವನ್ನು ಮನೆಯಿಂದ ಹೊರಗೆ ಹಾಕಿ ಲಾಕ್ ಮಾಡಿದ್ದ ಫೈನಾನ್ಸ್ ನವರು ಮನೆ ಹರಾಜಿಗೆ ಎಂದು ಫಲಕ ಹಾಕಿದ್ದರು.

ಸುರೇಶ ಕಾಂಬಳೆ ಅವರು ಕಳೆದ ಗುರುವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸಂಪರ್ಕಿಸಿ ಮನೆ ಬಿಡಿಸಿಕೊಡುವಂತೆ ವಿನಂತಿಸಿದ್ದರು. ಸಚಿವರ ಸೂಚನೆಯಂತೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಫೈನಾನ್ಸ್ ಸಂಸ್ಥೆಯವರನ್ನು ಕರೆಸಿ ಮಾತುಕತೆ ನಡೆಸಿದ್ದರು. ಬಾಕಿ ಇರುವ ಹಣ ತುಂಬಲು 2 ತಿಂಗಳು ಕಾಲಾವಕಾಶ ನೀಡಬೇಕು ಎನ್ನುವ ಷರತ್ತಿನೊಂದಿಗೆ ತಕ್ಷಣವೇ ಮನೆಯ ಬೀಗ ತೆರವು ಮಾಡಿ ಬಿಟ್ಟುಕೊಡಬೇಕು ಎಂದು ತಾಖೀತು ಮಾಡಿದರು.

ಅದರಂತೆ ಸಚಿವರ ಆಪ್ತ ಸಹಾಯಕ ಮಹಾಂತೇಶ ಹಿರೇಮಠ ಮಂಗಳವಾರ ಸ್ಥಳಕ್ಕೆ ತೆರಳಿ ಬ್ಯಾಂಕ್ ಸಿಬ್ಬಂದಿಯಿಂದ ಕೀ ಪಡೆದು ಮನೆಯ ಮಾಲಿಕರಿಗೆ ಹಸ್ತಾಂತರಿಸಿದರು. ಮಂಗಳವಾರ ಸಂಜೆ ಸುರೇಶ ಕಾಂಬಳೆ ಕುಟುಂಬ ತಮ್ಮ ಮನೆಗೆ ಪ್ರವೇಶ ಮಾಡಿದೆ.

ಖಾಸಗಿ ಫೈನಾನ್ಸ್ ನವರ ಕಿರುಕುಳದಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬಗಳ ನೆರವಿಗೆ ಬರುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *