ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಎಲೆಕ್ಟ್ರಾನಿಕ್ ಸಿಟಿ ಹಳದಿ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಸಿದ್ಧತೆ ಆರಂಭಿಸುತ್ತಿದೆ. ಇದರ ಭಾಗವಾಗಿ ಕಳೆದ ಭಾನುವಾರ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಆಗಮಿಸಿದ ದೇಶಿಯ ಮೊದಲ ಡ್ರೈವರ್ಲೆಸ್ ರೈಲು ಪರೀಕ್ಷೆಗೆ ಸಿದ್ಧತೆ ನಡೆದಿದೆ. ತಲಾ 45 ಮೆಟ್ರಿಕ್ ಟನ್ ತೂಕದ ರೈಲು ಬೋಗಿಗಳನ್ನು ಹಳಿಗೆ ಜೋಡಿಸುವ ಕಾರ್ಯ ಯಶಸ್ವಿಯಾಗಿದೆ.
ಟಿಟಾಗರ್ ರೈಲು ಸಿಸ್ಟಮ್ ಕಂಪನಿಯು ಜನವರಿ 6ರಂದು ಬೆಂಗಳೂರಿಗೆ ಹಳದಿ ಮಾರ್ಗಕ್ಕೆಂದು ಎರಡನೇ ರೈಲನ್ನು ಪೂರೈಸಿದೆ. 06 ಬೋಗಿಗಳ ಒಂದು ಸೆಟ್ ರೈಲು ಫೆಬ್ರವರಿ 09ರಂದು ಬೆಂಗಳೂರಿಗೆ ಆಗಮಿಸಿತು. ಈ ಒಂದೊಂದು ಬೋಗಿಗಳು 45 ಮೆಟ್ರಿಕ್ ಟನ್ ತೂಕ ಇವೆ. ಅವುಗಳನ್ನು 150 ಮೆಟ್ರಿಕ್ ಟನ್ಗಳವರೆಗೆ ಎತ್ತುವ ಮೊಬೈಲ್ ಟೆಲಿಸ್ಕೋಪ್ ಕ್ರೇನ್ ಬಳಸಿ ಸುರಕ್ಷಿತವಾಗಿ ಲಾರಿಯಿಂದ ಕೆಳಕ್ಕೆ ಇಳಿಸಲಾಗಿದೆ.
ಸೋಮವಾರ ಮಧ್ಯಾಹ್ನ 3 ಗಂಟೆಗೆ ಹೊಸ ಹಳದಿ ಮೆಟ್ರೋ ರೈಲು ಬೋಗಿಗಳನ್ನು ಹಳಿಗಳ ಮೇಲೆ ಜೋಡಿಸಲಾಗಿದೆ. ಒಂದೊಂದೆ ರೈಲು ಬೋಗಿಗಳನ್ನು ಟ್ರ್ಯಾಕ್ಗೆ ಮೇಲೆ ಇಳಿಸಿ ಪರಿಪೂರ್ಣ ರೈಲು ಮಾದರಿಯಲ್ಲಿ ಜೋಡಿಸಲಾಯಿತು. ಈ ಕಾರ್ಯವು ರಾತ್ರಿ 8.30ರ ಹೊತ್ತಿಗೆ ಯಶಸ್ವಿಯಾಯಿತು ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ (BMRCL) ಅಧಿಕಾರಿಗಳು ತಿಳಿಸಿದ್ದಾರೆ.

ಟೋಟಲ್ ಮೂವ್ಮೆಂಟ್ ಪ್ರೈವೇಟ್ ಲಿಮಿಟೆಡ್ನ ಕಾರ್ಮಿಕರು BMRCL ಅಧಿಕಾರಿಗಳು, ತಂತ್ರಜ್ಞರು ಮತ್ತು ಇಂಜಿನಿಯರ್ಗಳ ಸಮ್ಮುಖದಲ್ಲಿ ಮತ್ತು ಮೇಲ್ವಿಚಾರಣೆಯಲ್ಲಿ ಮೆಟ್ರೋ ಕೋಚ್ಗಳನ್ನು ಜೋಡಿಸಿದರು. ಪ್ರತಿ ಬೋಗಿಯನ್ನು ಆಕ್ಸಲ್ ಟ್ರಕ್ನಿಂದ ನಿಧಾನವಾಗಿ ಮೇಲಕ್ಕೆತ್ತಿ ಎಚ್ಚರಿಕೆಯಿಂದ ಹಳಿಗಳ ಮೇಲೆ ಇರಿಸುವಲ್ಲಿ ಅವರು ಯಶಸ್ವಿಯಾದರು. ಮೂರನೇ ರೈಲು ಬರುವುದು ಯಾವಾಗ? ಸದ್ಯ ಈ ಹೊಸ ಮೆಟ್ರೋ ರೈಲಿನ ಜೋಡಣೆ ಬೆನ್ನಲ್ಲೆ ಶೀಘ್ರವೇ ಸಿಗ್ನಲ್ ಟೆಸ್ಟ್, ಡ್ರೈವರ್ಲೆಸ್ ಆದ ಕಾರಣ ಈ ರೈಲು ಸಂಚಾರ ಸಿಗ್ನಲ್ಗಳನ್ನು ಹೇಗೆ ಮೇಲ್ವೀಚಾರಣೆ ಮಾಡುತ್ತದೆ ಎಂಬುದು ಪರಿಶೀಲಿಸಲಾಗುತ್ತದೆ. ಹತ್ತು ಹಲವು ಪ್ರಾಯೋಗಿಕ ಪರೀಕ್ಷೆಗಳು ನಡೆದ ಬಳಿಕ ವಾಣಿಜ್ಯ ಸಂಚಾರಕ್ಕೆ ಈ ರೈಲನ್ನು ಸಿದ್ಧಪಡಿಸಲಾಗುತ್ತದೆ. ಮಾರ್ಚ್ ಅಂತ್ಯಕ್ಕೆ ಹಳದಿ ಮಾರ್ಗದ ಮೂರನೇ ರೈಲು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.
ಕಡಿಮೆ ರೈಲುಗಳಿಂದಲೇ ಕಾರ್ಯಾಚರಣೆ..? ಇಷ್ಟು ಕಡಿಮೆ ರೈಲುಗಳನ್ನು ಇಟ್ಟುಕೊಂಡು 18.5 ಕಿಲೋ ಮೀಟರ್ ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗಿನ ಹಳದಿ ಮೆಟ್ರೋ ಮಾರ್ಗವನ್ನು ಆರಂಭಿಸಲು ಸಾಧ್ಯವಿಲ್ಲ. ಆರಂಭದಲ್ಲಿ ಕಡಿಮೆ ರೈಲುಗಳಿದ್ದು, ಅಧ ಗಂಟೆಗೆ ಒಮ್ಮೆ ಆವರ್ತನದಂತೆ ರೈಲು ಓಡಿಸಬಹುದು ಅಂತಲೂ ಹೇಳಲಾಗಿತ್ತು. ಹಳದಿ ಮಾರ್ಗದ ವಾಣಿಜ್ಯ ಕಾರ್ಯಾಚರಣೆ ಯಾವಾಗ ಆಗುತ್ತೋ ಎಂದು ಜನರು ಕಾಯುತ್ತಿದ್ದಾರೆ. ಬಿಎಂಆರ್ಸಿಎಲ್ ಮೇಲೆ ಪ್ರಯಾಣಿಕರು ಬೇಸರ ಸಹ ವ್ಯಕ್ತಪಡಿಸಿದ್ದಾರೆ. ಮಾರ್ಚ್ ಅಂತ್ಯಕ್ಕೆ ಮತ್ತೊಂದು ರೈಲು ಬರಲಿದೆ, ಇದೇ ಅಕ್ಟೋಬರ್ನಿಂದ ಪ್ರತಿ ತಿಂಗಳಿಗೂ ಒಪ್ಪಂದಂತೆ ಎರಡು ರೈಲುಗಳು ಬರಲಿವೆ ಎಂದು ಹೇಳಲಾಗಿದೆ. ಸದ್ಯ ಇರುವ ಅಲ್ಪ ರೈಲುಗಳನ್ನು ಇಟ್ಟುಕೊಂಡು ಕಾರ್ಯಾಚರಣೆ ಆರಂಭಿಸುತ್ತಾ? ಇಲ್ಲವಾ ಎಂದು ಕಾದು ನೋಡಬೇಕಿದೆ.