ಬೆಂಗಳೂರು: ಚಿತ್ರದುರ್ಗದ ಮುರುಘಾ ರಾಜೇಂದ್ರ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ದಾಖಲೆಗಳನ್ನು ಒದಗಿಸುವಂತೆ ತನಿಖಾಧಿಕಾರಿಗಳಿಗೆ ಸೋಮವಾರ ಹೈಕೋರ್ಟ್ ನಿರ್ದೇಶನ ನೀಡಿತು.
ತನ್ನ ವಿರುದ್ಧದ ಪ್ರಕರಣದ ದಾಖಲೆಗಳನ್ನು ಒದಗಿಸಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಚಿತ್ರದುರ್ಗದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಶಿವಮೂರ್ತಿ ಶರಣರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸಿಆರ್ಪಿಸಿ ಸೆಕ್ಷನ್ 91ರ ಅಡಿಯಲ್ಲಿ ತಿಳಿಸಿರುವಂತೆ ದಾಖಲೆಗಳನ್ನು ಪಡೆದುಕೊಳ್ಳುವುದಕ್ಕೆ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಲು ಆರೋಪಿಗಳನ್ನು ಪ್ರೇರೇಪಿಸಬಾರದು. ಅದು ಈ ಸೆಕ್ಷನ್ನ ಉದ್ದೇಶವಲ್ಲ. ಈ ರೀತಿಯ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿರುವುದು ಕಾನೂನು ಬಾಹಿರ ಎಂದು ನ್ಯಾಯಪೀಠ ತಿಳಿಸಿದೆ.
2022ರ ಜುಲೈ 24ರಿಂದ ಜುಲೈ 28ರವರೆಗಿನ ಅವಧಿಯಲ್ಲಿ ಕಾಟನ್ಪೇಟೆ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಮತ್ತು ಠಾಣೆಯ ಸಹಾಯಕ ಸಬ್ಇನ್ಸ್ಪೆಕ್ಟರ್ ಗಸ್ತು ತಿರುಗುವ ಸ್ಟೇಷನ್ ಹೌಸ್ ಡೈರಿ ಮತ್ತು ನೋಟ್ಬುಕ್ನ್ನು ಒದಗಿಸಬೇಕು. ಜೊತೆಗೆ, ಜುಲೈ 2022ಕ್ಕೆ ಸಂಬಂಧಿಸಿದಂತೆ ಬಸ್ ನಿಲ್ದಾಣದಲ್ಲಿ ನಿರ್ವಹಿಸಲಾದ ಪಾಳಿಯ ವಿವರ, ಹೊಯ್ಸಳ ವಾಹನದ ಸಂಖ್ಯೆ, ಲಾಗ್ಬುಕ್ ಮತ್ತು ಡಿಜಿಟಲ್ ನೋಂದಣಿ ನಿಯಂತ್ರಣಾ ಕೊಠಡಿಯಿಂದ ಪಡೆದ ಮಾಹಿತಿ ಮೂರು ಫೋನ್ ಪೇ ಸಂಖ್ಯೆಗಳಿಗೆ ಸಂಬಂಧಿಸಿದ ಖಾತೆಯ ವಿವರ ಹಾಗೂ 2022ರ ಆಗಸ್ಟ್ 28ರಂದು ಮೈಸೂರಿನ ಮಕ್ಕಳ ಒಡನಾಡಿ ಸಮಿತಿಗೆ ಕಳುಗಿಸಿರುವ ಇ-ಮೇಲ್ ವಿವರಗಳನ್ನು ಶ್ರೀಗಳು ಕೋರಿದ್ದರು.
ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ಚಿತ್ರದುರ್ಗದ ವಿಚಾರಣಾ ನ್ಯಾಯಾಲಯಕ್ಕೆ ಮಾಹಿತಿ ಹಕ್ಕು ಕಾಯಿದೆಯಡಿ ದಾಖಲೆಗಳನ್ನು ಪಡೆಯಬಹುದು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಿವರಿಸಿದ್ದರು. ಇದನ್ನು ದಾಖಲಿಸಿಕೊಂಡಿದ್ದ ನ್ಯಾಯಾಲಯ ಶ್ರೀಗಳ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿತ್ತು.
ಮುರುಘಾ ಮಠದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನೀಯರು ನೀಡಿದ್ದ ದೂರಿನ ಆಧಾರದಲ್ಲಿ ಐಪಿಸಿ ಮತ್ತು ಪೋಕ್ಸೋ ಕಾಯಿದೆಯಡಿ ಅರ್ಜಿದಾರ ಮುರುಘಾ ಶರಣರು ಆರೋಪಿಯಾಗಿದ್ದಾರೆ.