ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಿಸಿ ಬಿಸಿ ಫಿಲ್ಟರ್ ಕಾಫಿ ಕುಡಿಯುವ ಮೊದಲು ಜನರು ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳಬೇಕು. ಹಲವು ದಿನದಿಂದ ಕೇಳಿ ಬರುತ್ತಿದ್ದ ಹೋಟೆಲ್ ಮಾಲೀಕರ ಒತ್ತಾಯಕ್ಕೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಒಪ್ಪಿಗೆ ನೀಡಿದೆ. ಇದರಿಂದಾಗಿ ನಗರದ ಹೋಟೆಲ್ಗಳಲ್ಲಿ ಫಿಲ್ಟರ್ ಕಾಫಿ ದರ ಏರಿಕೆಯಾಗಲಿದೆ.
ನಗರದಲ್ಲಿ ಫಿಲ್ಟರ್ ಕಾಫಿ ದರವನ್ನು ಏರಿಕೆ ಮಾಡಲು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಈ ಹಿಂದೆಯೇ ಚಿಂತನೆ ನಡೆಸಿತ್ತು. ಆದರೆ ವಿವಿಧ ಕಾರಣಕ್ಕೆ ಈ ಪ್ರಸ್ತಾಪಕ್ಕೆ ತಡೆ ನೀಡಲಾಗಿತ್ತು. ಈಗ ಕಾಫಿ ಪುಡಿ ದರವನ್ನು ಮುಂದಿಟ್ಟುಕೊಂಡು ಫಿಲ್ಟರ್ ಕಾಫಿ ದರವನ್ನು ಏರಿಕೆ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಿದಾಗ, ವಾಣಿಜ್ಯ ಬಳಕೆ ಸಿಲಿಂಡರ್ ದರ ಹೆಚ್ಚಾದಾಗ ಫಿಲ್ಟರ್ ಕಾಫಿ/ ಟೀ ದರವನ್ನು ಏರಿಕೆ ಮಾಡಲು ಹೋಟೆಲ್ ಮಾಲೀಕರು ಮುಂದಾಗಿದ್ದರು. ಆದರೆ ಈ ಕುರಿತು ಅಂತಿಮ ನಿರ್ಧಾರವನ್ನು ಕೈಗೊಂಡಿರಲಿಲ್ಲ.
ಕಾಫಿ ದರ 5 ರೂ. ಏರಿಕೆ: ಈಗ ಫಿಲ್ಟರ್ ಕಾಫಿ ದರವನ್ನು 5 ರೂ. ಹೆಚ್ಚಳ ಮಾಡಲು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಒಪ್ಪಿಗೆ ನೀಡಿದೆ. ಮಾರ್ಚ್ 1ರಿಂದಲೇ ಹೊಸ ದರ ಜಾರಿಗೆ ಬರಲಿದೆ. ಮಾಹಿತಿಗಳ ಪ್ರಕಾರ ಹೋಟೆಲ್, ದರ್ಶನಿಗಳಲ್ಲಿ ಫಿಲ್ಟರ್ ಕಾಫಿ ದರ 5 ರೂ. ಹೆಚ್ಚಳವಾಗಲಿದೆ. ಕಾಫಿ ಬೀಜದ ದರ ಏರಿಕೆಯ ಕಾರಣ ಕಾಫಿ ಪುಡಿ ದರದಲ್ಲಿ ಭಾರೀ ಹೆಚ್ಚಳವಾಗಿದೆ. 2024ರ ಆರಂಭದಲ್ಲಿ 1 ಕೆಜಿ ಕಾಫಿ ಪುಡಿ ದರ 450 ರೂ. ತನಕ ಇತ್ತು. ಈಗ 600 ರಿಂದ 880 ರೂ. ತನಕ ಬಂದು ತಲುಪಿದೆ. ಆದ್ದರಿಂದ ಕಾಫಿ ಪುಡಿ ದರದಲ್ಲಿ ಏರಿಕೆಯಾಗಿದ್ದು, ಹೋಟೆಲ್ ಮಾಲೀಕರಿಗೆ ಹೊರೆಯಾಗುತ್ತಿದೆ.
ಹಾಲಿನ ದರ ಏರಿಕೆ, ಕಾಫಿ ಪುಡಿ ದರ ಏರಿಕೆ, ಸಿಲಿಂಡರ್ ಬೆಲೆಗಳು, ಏರುತ್ತಿರುವ ಹೋಟೆಲ್ ನಿರ್ವಹಣಾ ವೆಚ್ಚ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಫಿಲ್ಟರ್ ಕಾಫಿ ದರವನ್ನು 5 ರೂ. ತನಕ ಹೆಚ್ಚಿಸಲು ನಿರ್ಧರಿಸಲಾಗಿದೆ. 2024ರಲ್ಲಿ ಸುರಿದ ಭಾರೀ ಮಳೆಯ ಕಾರಣ ರಾಜ್ಯ ಮತ್ತು ದೇಶದಲ್ಲಿ ಕಾಫಿ ಉತ್ಪಾದನೆ ಕುಸಿತವಾಗಿದೆ. ಆದ್ದರಿಂದ ಕಾಫಿ ಬೀಜಕ್ಕೆ ಅಧಿಕ ಬೇಡಿಕೆ ಇದೆ. ಮಾರುಕಟ್ಟೆಗಿಂತ ಅಧಿಕ ದರವನ್ನು ನೀಡುತ್ತೇವೆ ಎಂದರೂ ಸಹ ಕಾಫಿ ಬೀಜಗಳು ಸಿಗುತ್ತಿಲ್ಲ. ಇದರಿಂದಾಗಿ ಕಾಫಿ ಪುಡಿಗೂ ಬೇಡಿಕೆ ಹೆಚ್ಚಾಗಿದೆ. ಮಾಹಿತಿಗಳ ಪ್ರಕಾರ ವಯನಾಡ್, ಇಡುಕ್ಕಿ ಮತ್ತು ಕೊಡಗು ಜಿಲ್ಲೆಯಿಂದ ಕಾಫಿ ಬೀಜಗಳನ್ನು ಖರೀದಿ ಮಾಡಿ ಬೆಂಗಳೂರು ನಗರ ಹೋಟೆಲ್ಗಳಿಗೆ ಪುಡಿಯನ್ನು ಸರಬರಾಜು ಮಾಡಲಾಗುತ್ತದೆ. ಆದರೆ ಈ ಬಾರಿ ಕೇರಳ, ಕೊಡಗು ಜಿಲ್ಲೆಗಳಲ್ಲಿ ಕಾಫಿ ಬೆಳೆ ಕುಸಿತವಾಗಿದೆ. ಆದ್ದರಿಂದ ಕಾಫಿ ಬೀಜಕ್ಕೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ.
ಮಾರ್ಚ್ ಅಂತ್ಯದ ವೇಳೆಗೆ ಕಾಫಿ ಪುಡಿ ಬೆಲೆ ಇನ್ನಷ್ಟು ಏರಿಕೆಯಾಗಲಿದೆ. ಆದ್ದರಿಂದ ಈಗ ಫಿಲ್ಟರ್ ಕಾಫಿ ದರ ಹೆಚ್ಚಳ ಅನಿವಾರ್ಯ ಎಂಬುದು ಹೋಟೆಲ್ ಮಾಲೀಕರ ಮಾತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಹ ಕಾಫಿ ಬೆಲೆ ಏರಿಕೆಯಾಗುತ್ತಿದೆ.