ಬೆಂಗಳೂರು || ಮನ್-ಕಿ- ಬಾತ್ ಬಹಳ ಅರ್ಥಪೂರ್ಣ, ವೈಶಿಷ್ಟ್ಯಪೂರ್ಣ: ವಿಜಯೇಂದ್ರ ವಿಶ್ಲೇಷಣೆ

ಬೆಂಗಳೂರು || ಮನ್-ಕಿ- ಬಾತ್ ಬಹಳ ಅರ್ಥಪೂರ್ಣ, ವೈಶಿಷ್ಟ್ಯಪೂರ್ಣ: ವಿಜಯೇಂದ್ರ ವಿಶ್ಲೇಷಣೆ

ಬೆಂಗಳೂರು: ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಮನ್-ಕಿ- ಬಾತ್ ಬಹಳ ಅರ್ಥಪೂರ್ಣ ಮತ್ತು ವಿಶಿಷ್ಟವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದರು.

ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ. ಕೆ. ರಾಮಮೂರ್ತಿ ಅವರ ಜಯನಗರದ ನಿವಾಸದಲ್ಲಿ ಇಂದು ಬಿ.ವೈ. ವಿಜಯೇಂದ್ರ ಅವರು ಪ್ರಧಾನಮಂತ್ರಿಯವರ ಮನ್-ಕಿ-ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ವಿವಿಧ ಕ್ಷೇತ್ರಗಳ ಕುರಿತು ಬೆಳಕು ಚೆಲ್ಲಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಾಹ್ಯಾಕಾಶ ತಂತ್ರಜ್ಞಾನ ಕುರಿತು ಮಾತನಾಡಿದ್ದಾರೆ. ಮಾರ್ಚ್ 8ರಂದು ಮಹಿಳಾ ದಿನದ ಆಚರಣೆ ಹಿನ್ನೆಲೆಯಲ್ಲಿ ಸಾಧಕ ಮಹಿಳೆಯರ ಕುರಿತು ಬೆಳಕು ಚೆಲ್ಲಿದ್ದಾರೆ. ವನ್ಯಮೃಗಗಳ ಸಂರಕ್ಷಣೆ ಕುರಿತು ಮಾತನಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಯುವಜನರ ಸಾಧನೆ ಕುರಿತು ಪ್ರೇರಣಾದಾಯಕ ಮಾತನಾಡಿದ್ದಾರೆ ಎಂದು ವಿವರಿಸಿದರು.

ಈಗ ಪರೀಕ್ಷಾ ಸಮಯ. ಎಲ್ಲ ಪರೀಕ್ಷಾರ್ಥಿಗಳು ಒತ್ತಡವಿಲ್ಲದೆ ಪರೀಕ್ಷೆ ಎದುರಿಸಬೇಕೆಂದು ಕಿವಿಮಾತು ಹೇಳಿದ್ದಾರೆ. ಇದೊಂದು ವಿಶಿಷ್ಟ ಕಾರ್ಯಕ್ರಮ ಎಂದು ತಿಳಿಸಿದರು. ಕರ್ನಾಟಕದ ಬಗ್ಗೆ 2 ಅಂಶಗಳನ್ನು ಉಲ್ಲೇಖಿಸಿದ್ದಾರೆ. ಸಾಧಕ ಕ್ರೀಡಾಪಟು ಕುರಿತು ಮಾತನಾಡಿದ್ದಾರೆ. ಸೋಲಿಗರ ಸಮುದಾಯದ ಹುಲಿ ಸಂರಕ್ಷಣೆ ಕುರಿತು ನೆನಪಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು,  ಬಿಬಿಎಂಪಿ ಮಾಜಿ ಸದಸ್ಯರು, ಜಿಲ್ಲಾ ಪದಾಧಿಕಾರಿಗಳು ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು.

ರಾಜ್ಯದ ವಿರುದ್ಧ ಪಿತೂರಿ ಸಹಿಸಲಸಾಧ್ಯ ಈ ನೆಲದ ನೀರು, ಅನ್ನ, ಗಾಳಿ ಸೇವಿಸಿ ಕನ್ನಡದ ವಿರುದ್ಧ ಮಾತನಾಡುವುದು, ರಾಜ್ಯದ ವಿರುದ್ಧ ಪಿತೂರಿ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬೆಳಗಾವಿ ಗಡಿಭಾಗದಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಘಟನೆ, ಬಸ್ ಸಂಚಾರ ಸ್ಥಗಿತ ಕುರಿತು ಪ್ರಶ್ನೆಗೆ ಅವರು ಉತ್ತರ ನೀಡಿದರು.

ನಮ್ಮ ನೆಲದಲ್ಲಿ ಇದ್ದುಕೊಂಡು ಕನ್ನಡಿಗರ ತೇಜೋವಧೆ ಮಾಡುವುದು ಅಕ್ಷಮ್ಯ. ಅನೇಕ ಕನ್ನಡಪರ ಹೋರಾಟಗಾರರ ಹೇಳಿಕೆಗಳನ್ನು ಗಮನಿಸಿದ್ದೇನೆ. ಇದರ ವಿರುದ್ಧ ಕನ್ನಡಿಗರು ಧ್ವನಿ ಎತ್ತಬೇಕು. ಷಡ್ಯಂತ್ರ, ಪಿತೂರಿ ಮಾಡುವವರನ್ನು ಸರಕಾರ ಹತ್ತಿಕ್ಕಬೇಕಿದೆ ಎಂದು ಆಗ್ರಹಿಸಿದರು.

ಸರಕಾರದಿಂದ ದಾಂಧಲೆ ಮಾಡಿದವರನ್ನು ರಕ್ಷಿಸುವ ಕೆಲಸ.. ಕಾಂಗ್ರೆಸ್ ಶಾಸಕರ ಬೆಂಬಲಿಗನ ಹತ್ಯೆ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಕೊಲೆಗೆ ರಾಜ್ಯ ಸರಕಾರವೇ ಹೊಣೆ ಎಂದು ನುಡಿದರು.

ಉದಯಗಿರಿ ಘಟನೆ ಹಿನ್ನೆಲೆಯಲ್ಲಿ ನಾಳೆ ಮೈಸೂರು ಚಲೋ ನಡೆಯಲಿದೆ. ನಾನು ಮೈಸೂರಿಗೆ ತೆರಳಲಿದ್ದೇನೆ. ರಾಜ್ಯ ಸರಕಾರವು ಕಾನೂನು- ಸುವ್ಯವಸ್ಥೆ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಉದಯಗಿರಿ ಘಟನೆ, ಪೊಲೀಸ್ ಠಾಣೆಗೆ ಪುಡಾರಿಗಳು ನುಗ್ಗಿ ದಾಂಧಲೆ ಮಾಡಿದವರನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ದರೋಡೆ ಕೊಲೆಗಳು ನಡೆಯುತ್ತಿವೆ. ಬೆಂಗಳೂರು ಸುರಕ್ಷಿತವಾಗಿಲ್ಲ; ಇದೆಲ್ಲದಕ್ಕೂ ರಾಜ್ಯ ಸರಕಾರವೇ ಹೊಣೆ ಹೊರಬೇಕು ಎಂದು ತಿಳಿಸಿದರು. ಗೃಹ ಸಚಿವರ ಹೇಳಿಕೆಯÀನ್ನು ಗಮನಿಸಿದ್ದೇನೆ. ನಾನು ರಾಜೀನಾಮೆ ಕೊಡಬೇಕೇ? ಅಥವಾ ಕೊಡುತ್ತೇನೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಇದು ಅವಿವೇಕತನದ ಪರಮಾವಧಿ. ಕಾನೂನು- ಸುವ್ಯವಸ್ಥೆ ಕಾಪಾಡಿ ಅಭಿವೃದ್ಧಿ ಮಾಡಬೇಕೆಂದು ನಿಮಗೆ ರಾಜ್ಯದ ಜನರು ಆಶೀರ್ವಾದ ಮಾಡಿದ್ದಾರೆ. ಅದನ್ನು ಮಾಡದೇ ಈ ರೀತಿ ಹೇಳಿಕೆ ನೀಡಿದರೆ ದೇಶದ್ರೋಹಿಗಳು, ಕೊಲೆಗಡುಕರಿಗೆ ಆನೆಬಲ ಬಂದಂತಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *