ಮೈಸೂರು: ಬೇಸಿಗೆ ಬರುತ್ತಿದ್ದಂತೆಯೇ ಅರಣ್ಯದಲ್ಲಿ ಹಲವು ಕಾರಣಗಳಿಂದು ಕಾಡ್ಗಿಚ್ಚು ಸಂಭವಿಸುತ್ತವೆ. ಇದನ್ನು ತಡೆಯುವ ಸಲುವಾಗಿ ಅರಣ್ಯ ಇಲಾಖೆ ಬೆಂಕಿ ರೇಖೆ ನಿರ್ಮಾಣ ಸೇರಿದಂತೆ ಹಲವು ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುತ್ತದೆ. ಇದು ಎಲ್ಲ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತದೆ. ಆದರೆ ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಚಾಮುಂಡಿಬೆಟ್ಟ ಅರಣ್ಯಕ್ಕೆ ಎಲ್ಲ ಸುರಕ್ಷತಾ ಕ್ರಮಗಳ ನಡುವೆಯೂ ಬೆಂಕಿ ಹೊತ್ತಿ ಉರಿದಿದೆ ಎಂದರೆ ಅದು ಸ್ವಾಭಾವಿಕವಲ್ಲ ಕಿಡಿಗೇಡಿಗಳ ಕೃತ್ಯ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಹೀಗಾಗಿ ಇನ್ಮುಂದೆ ಚಾಮುಂಡಿಬೆಟ್ಟದಲ್ಲಿ ರಸ್ತೆ ಬಿಟ್ಟು ಅರಣ್ಯ ಪ್ರದೇಶದೊಳಗೆ ತೆರಳುವುದು, ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಆಹಾರ ಸೇವಿಸುವುದು, ಬೀಡಿ, ಸಿಗರೇಟ್, ಮದ್ಯಪಾನ ಮಾಡುವವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಬಿದ್ದ ಬೆಂಕಿ ಚಾಮುಂಡಿಬೆಟ್ಟ ಪ್ರದೇಶದ ಸುಮಾರು 35 ಎಕರೆ ಅರಣ್ಯವನ್ನು ಬಲಿತೆಗೆದುಕೊಂಡಿದೆ. ಪ್ರತಿ ವರ್ಷವೂ ಎಷ್ಟೇ ಜಾಗ್ರತೆ ವಹಿಸಿದರೂ ಕಾಡ್ಗಿಚ್ಚು ಸಂಭವಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಕೆಲವು ಕಿಡಿಗೇಡಿಗಳು ಹೊಂಚು ಹಾಕಿ ಕೃತ್ಯವನ್ನು ಎಸಗುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬೆಂಕಿ ನಂದಿಸಿದ ಬಳಿಕ ಹದ್ದಿನ ಕಣ್ಣಿಟ್ಟು ಕಾಯಲಾಗುತ್ತಿದೆ. ಜತೆಗೆ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಸರ್ವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿ ಒಂದು ಸಮಾಧಾನದ ವಿಚಾರ ಏನೆಂದರೆ ಬೆಂಕಿ ಅವಘಡದಲ್ಲಿ ಕುರುಚಲು ಅರಣ್ಯ ನಾಶವಾಗಿದೆ. ಆದರೆ ವನ್ಯಜೀವಿಗಳಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಎನ್ನುವುದಾಗಿದೆ.