ಬೆಂಗಳೂರು: ಭಾರತೀಯ ರೈಲ್ವೆ ಬೆಂಗಳೂರು ನಗರದ ಸುತ್ತಲೂ 287 ಕಿ. ಮೀ. ರೈಲ್ವೆ ಜಾಲ ವಿಸ್ತರಣೆಯ ಯೋಜನೆ ರೂಪಿಸಿದೆ. ಈ ಕುರಿತು ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಲಾಗುತ್ತಿದೆ. ಆದರೆ ಆಸ್ತಿ ಮಾಲೀಕರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಪೊಲೀಸರ ಜೊತೆ ಹಲವು ಬಾರಿ ಸ್ಥಳಕ್ಕೆ ಭೇಟಿ ನೀಡಿದರೂ ಸಹ ಸಮೀಕ್ಷೆ ಪೂರ್ಣಗೊಳಿಸಲು ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ಪ್ರಸ್ತಾವಿತ ಯೋಜನೆ 287 ಕಿ. ಮೀ. ಇದ್ದು, 7 ಕಾರಿಡಾರ್ ಒಳಗೊಂಡಿದೆ. ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ ಒಂದು ಕಾರಿಡಾರ್ನ ಕಾರ್ಯ ಸಾಧ್ಯತಾ ವರದಿ ಅಂತಿಮಗೊಂಡಿದೆ. ಉಳಿದ ವರದಿ ತಯಾರು ಮಾಡಲು ವಿರೋಧವನ್ನು ಎದುರಿಸುವಂತೆ ಆಗಿದೆ.
ಕಾರ್ಯ ಸಾಧ್ಯತಾ ವರದಿಯಲ್ಲಿ ಯೋಜನೆ ಎಲ್ಲಿ ಹಾದು ಹೋಗಬೇಕು?, ಎಷ್ಟು ವೆಚ್ಚವಾಗಲಿದೆ?, ಎಲ್ಲೆಲ್ಲಿ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕು?, ಎಷ್ಟು ಆಸ್ತಿ ಯೋಜನೆ ವ್ಯಾಪ್ತಿಗೆ ಸೇರುತ್ತದೆ? ಮುಂತಾದ ಮಾಹಿತಿ ಇರಲಿದೆ. ಆದರೆ ಈ ವರದಿ ತಯಾರು ಮಾಡಲು ಆಸ್ತಿ ಮಾಲೀಕರು ವಿರೋಧ ಮಾಡುತ್ತಿದ್ದು, ಪದೇ ಪದೇ ಸ್ಥಳಕ್ಕೆ ಭೇಟಿ ನೀಡಿದರೂ ಮಾಲೀಕರು ಸಮೀಕ್ಷೆಗೆ ಒಪ್ಪಿಗೆ ಕೊಡುತ್ತಿಲ್ಲ.
ಆಸ್ತಿ ಕಳೆದುಕೊಳ್ಳುವ ಭಯ: ಬೆಂಗಳೂರು ನಗರದ ರೈಲು ನಿಲ್ದಾಣಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನಗರದ ಹೊರವಲಯದಲ್ಲಿ ರೈಲ್ವೆ ಜಾಲ ವಿಸ್ತರಣೆ ಮಾಡಲಾಗುತ್ತಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಿದಾಗ ರೈಲ್ವೆ ಮಂಡಳಿ ಕಾರ್ಯ ಸಾಧ್ಯತಾ ವರದಿಯನ್ನು ಮೊದಲು ಅಂತಿಮಗೊಳಿಸಲು ಸೂಚನೆ ಕೊಟ್ಟಿದೆ.
7 ಕಾರಿಡಾರ್ಗಳ ಪೈಕಿ ದೇವನಹಳ್ಳಿ-ವಡ್ಡರಹಳ್ಳಿ ನಡುವಿನ 28.5 ಕಿ. ಮೀ. ಕಾರಿಡಾರ್ ಕಾರ್ಯ ಸಾಧ್ಯತಾ ವರದಿ ಮಾತ್ರ ಅಂತಿಮವಾಗಿದೆ. ಉಳಿದ 6 ಕಾರಿಡಾರ್ಗಳ ವರದಿ ತಯಾರು ಮಾಡಲು ಸರ್ವೇ ಅಧಿಕಾರಿಗಳ ಜೊತೆ ರೈಲ್ವೆ ಇಲಾಖೆ ಅಧಿಕಾರಿಗಳು ಪದೇ ಪದೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆಲವು ಸಲ ಪೊಲೀಸರ ಜೊತೆ ಸಹ ಅಧಿಕಾರಿಗಳು ಹೋಗಿದ್ದು, ಆಸ್ತಿ ಮಾಲೀಕರು ಗರಂ ಆಗಿದ್ದಾರೆ. ನಿಡವಂದ-ವಡ್ಡರಹಳ್ಳಿ (40.3 ಕಿ. ಮೀ.), ದೇವನಹಳ್ಳಿ-ಮಾಲೂರು (46.5 ಕಿ. ಮೀ.), ಮಾಲೂರು-ಹೀಲಲಿಗೆ (52 ಕಿ. ಮೀ.), ಹೀಲಲಿಗೆ-ಹೆಜ್ಜಾಲ (42 ಕಿ. ಮೀ.), ಹೆಜ್ಜಾಲ-ಸೋಲೂರು (43.5 ಕಿ. ಮೀ.) ಮತ್ತು ಸೋಲೂರು-ನಿಡವಂದ (34.2 ಕಿ. ಮೀ.) ಕಾರಿಡಾರ್ ಸಮೀಕ್ಷೆ ಇನ್ನೂ ಬಾಕಿ ಇದೆ. ಸಮೀಕ್ಷೆ ನಡೆಸುವವರು ಸ್ಥಳದಲ್ಲಿದ್ದಾರೆ. ಆದರೆ ಆಸ್ತಿ ಮಾಲೀಕರು ಸಮೀಕ್ಷೆ ಮಾಡಲು ಅನುಮತಿ ನೀಡುತ್ತಿಲ್ಲ. ಯೋಜನೆಗೆ ಆಸ್ತಿಯನ್ನು ನೀಡಲು ಅವರು ಒಪ್ಪಿಗೆ ನೀಡುತ್ತಿಲ್ಲ. ಆಸ್ತಿಯೊಳಗೆ ಹೋಗಲು ಅನುಮತಿ ನೀಡದಿದ್ದರೆ ಸಮೀಕ್ಷೆ ನಡೆಸುವುದು ಹೇಗೆ? ಎಂದು ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ನಮ್ಮ ಭೂಮಿ ಬದಲು ಪಕ್ಕದ ಜಮೀನು ಸಮೀಕ್ಷೆ ಮಾಡಿ ಎಂದು ಭೂ ಮಾಲೀಕರು ಒತ್ತಾಯಿಸುತ್ತಿದ್ದಾರೆ. ತೀವ್ರ ವಿರೋಧದ ಕಾರಣ ಸಮೀಕ್ಷೆ ಕಾರ್ಯ ವಿಳಂಬವಾಗಿದೆ. ಎಲ್ಲಾ ಕಾರಿಡಾರ್ಗಳಲ್ಲೂ ಒಟ್ಟಿಗೆ ಸಮೀಕ್ಷೆಯನ್ನು ಆರಂಭಿಸಲಾಗಿತ್ತು. ಆದರೆ ಒಂದು ಕಾರಿಡಾರ್ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ.