ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎ೦ಆರ್ಸಿಎಲ್) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 15-20 ನಮ್ಮ ಮೆಟ್ರೋ ನಿಲ್ದಾಣಗಳಿಗೆ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಮುಂದಿನ ಒಂದೆರಡು ವಾರದಲ್ಲಿ ಈ ಬಸ್ ಸೇವೆಗಳು ಆರಂಭವಾಗುತ್ತಿದ್ದು ಮಿಡಿ ಬಸ್ಗಳನ್ನು ಈ ಸೇವೆಗೆ ನಿಯೋಜನೆ ಮಾಡಲಾಗುತ್ತದೆ. ನಮ್ಮ ಮೆಟ್ರೋಗೆ ಪ್ರಯಾಣಿಕರನ್ನು ಸೆಳೆಯಲು ಈ ಯೋಜನೆ ರೂಪಿಸಲಾಗಿದೆ.
ಮೆಟ್ರೋ ನಿಲ್ದಾಣವನ್ನು ವಿವಿಧ ಬಡಾವಣೆಗಳಿಗೆ ಸಂಪರ್ಕಿಸಲು ಬಿಎಂಟಿಸಿ ಜೊತೆ ಸೇರಿ ಬಿಎಂಆರ್ಸಿಎಲ್ ಮೆಟ್ರೋ ಫೀಡರ್ ಸೇವೆಯ ಯೋಜನೆ ರೂಪಿಸಿದೆ. ಈಗಾಗಲೇ ಬಸ್ ಸೇವೆ ಇರುವ ಮೆಟ್ರೋ ಫೀಡರ್ ಮಾರ್ಗದ ಜೊತೆ ಹೊಸ ಹೊಸ ಮಾರ್ಗದಲ್ಲಿಯೂ ಬಸ್ ಸಂಚಾರ ಆರಂಭವಾಗಲಿದೆ.
ಪ್ರತಿದಿನ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಈ ಮೆಟ್ರೋ ಫೀಡರ್ ಸೇವೆ ಪ್ರಾರಂಭಿಸಲಾಗುತ್ತಿದೆ. ಮೆಟ್ರೋ ನಿಲ್ದಾಣಗಳಿಗೆ ಆಟೋ, ಕ್ಯಾಬ್ಗಳ ಮೂಲಕ ಆಗಮಿಸುವುದು ದುಬಾರಿಯಾಗಿದೆ. ಆದ್ದರಿಂದ ಬಸ್ ಸೇವೆಯ ಸಂಖ್ಯೆಯನ್ನು ಹೆಚ್ಚಿಸಲು ಬಿಎಂಟಿಸಿ, ಬಿಎಂಆರ್ಸಿಎಲ್ ಯೋಜನೆ ರೂಪಿಸಿವೆ.
68 ಮೆಟ್ರೋ ನಿಲ್ದಾಣಗಳು: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ನೇರಳೆ ಮತ್ತು ಹಸಿರು ಮಾರ್ಗದಲ್ಲಿ 68 ನಿಲ್ದಾಣಗಳಿದ್ದು, 46 ನಿಲ್ದಾಣಗಳಿಗೆ 208 ಫೀಡರ್ ಬಸ್ಗಳನ್ನು ಬಿಎಂಟಿಸಿ ಓಡಿಸುತ್ತಿದೆ. ಆದರೂ ಸಹ ಮೆಟ್ರೋ ನಿಲ್ದಾಣದಿಂದ ವಿವಿಧ ಬಡಾವಣೆ, ಕಛೇರಿಗೆ ಸುಲಭವಾಗಿ ತಲುಪುವುದು ಕಷ್ಟವಾಗಿದೆ. ಆದ್ದರಿಂದ ಜನರು ಮೆಟ್ರೋಗಿಂತ ಖಾಸಗಿ ವಾಹನದ ಮೊರೆ ಹೋಗುತ್ತಿದ್ದಾರೆ.
ಮೆಟ್ರೋ ನಿಲ್ದಾಣದ ಸಂಪರ್ಕ ಉತ್ತಮ ಪಡಿಸಲು ಅಧ್ಯಯನ ವರದಿ ತಯಾರಿ ಮಾಡಿ, ಅದರ ಆಧಾರದ ಮೇಲೆ ಫೀಡರ್ ಬಸ್ ಸಂಖ್ಯೆ ಹೆಚ್ಚಿಸಲು ಬಿಎಂಟಿಸಿ ಮುಂದಾಗಿದೆ. 15-20 ನಿಲ್ದಾಣಗಳ ಪಟ್ಟಿಯನ್ನು ಮಾಡಲಾಗಿದ್ದು, ಇವುಗಳಲ್ಲಿ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುವ 5 ಬಸ್ಗಳು ಸಂಚಾರ ನಡೆಸಲಿವೆ. ಮೆಟ್ರೋ ನಿಲ್ದಾಣದ ಪ್ರಯಾಣಿಕರ ಸಂಖ್ಯೆ, ಯಾವ ಹೊತ್ತಿನಲ್ಲಿ ಹೆಚ್ಚು ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಪೀಕ್ ಅವರ್ ಟ್ರಾಫಿಕ್ ಹೇಗಿದೆ, ಮೆಟ್ರೋ ದರಗಳು, 8-10 ಕಿ. ಮೀ. ವ್ಯಾಪ್ತಿಯಲ್ಲಿನ ಜನಸಂದಣಿ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಎಂಟಿಸಿ ಬಸ್ಗಳನ್ನು ಓಡಿಸಲಿದೆ. ನಮ್ಮ ಮೆಟ್ರೋ, ಬಿಎಂಟಿಸಿ ಎರಡಕ್ಕೂ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣಗಳನ್ನು ಗುರುತಿಸಲಾಗಿದೆ. ಈಗಿರುವ ಕೆಲವು ಫೀಡರ್ ಸೇವೆಗಳಿಗೆ ಉತ್ತಮ ಪ್ರತಿಕ್ರಿಯೆ ಇಲ್ಲ. ಅವುಗಳನ್ನು ಬದಲಾವಣೆ ಮಾಡಿ ಹೊಸ ಮಾರ್ಗದಲ್ಲಿ ಬಸ್ ಓಡಿಸಲಾಗುತ್ತದೆ. ಅದಕ್ಕಾಗಿ ಬಿಎಂಆರ್ಸಿಎಲ್ ಜೊತೆಗೂ ಚರ್ಚಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.
ಬಿಎಂಟಿಸಿ ಅಧಿಕಾರಿಗಳ ಮಾಹಿತಿ ಪ್ರಕಾರ 58 ಮಾರ್ಗದಲ್ಲಿ 46 ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುವಂತೆ 208 ಬಸ್ಗಳು ಸದ್ಯ ಸಂಚಾರ ನಡೆಸುತ್ತಿವೆ. ಈ ಬಸ್ಗಳಲ್ಲಿ ಪ್ರತಿದಿನ 1 ಲಕ್ಷ ಪ್ರಯಾಣಿಕರು ಸಂಚಾರವನ್ನು ನಡೆಸುತ್ತಿದ್ದಾರೆ. ಈಗ 9 ಮೀಟರ್ ಉದ್ದದ ಮಿಡಿ ಬಸ್ಗಳನ್ನು ಮೆಟ್ರೋ ಫೀಡರ್ ಸೇವೆಗೆ ನಿಯೋಜನೆ ಮಾಡಲು ಬಿಎಂಟಿಸಿ ಮುಂದಾಗಿದೆ. 600 ಮಿಡಿ ಬಸ್ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿದ್ದು, ಇವುಗಳಲ್ಲಿ 90 ಇ-ಬಸ್ಗಳು. ನಮ್ಮ ಮೆಟ್ರೋ ದರವನ್ನು ಪರಿಷ್ಕರಣೆ ಮಾಡಿದ ಬಳಿಕ ಮೆಟ್ರೋ ಪ್ರಯಾಣಿಕರ ಕೊರತೆಯನ್ನು ಎದುರಿಸುತ್ತಿದೆ. ಆದ್ದರಿಂದ ಮೆಟ್ರೋಗೆ ಪ್ರಯಾಣಿಕರನ್ನು ಸೆಳೆಯಲು ಬಿಎಂಟಿಸಿ ಜೊತೆ ಸೇರಿ ಹೊಸ ಫೀಡರ್ ಬಸ್ ಸೇವೆಯನ್ನು ಆರಂಭಿಸಲಾಗುತ್ತಿದೆ. ಈ ಸೇವೆಗೆ ಹೇಗೆ ಪ್ರತಿಕ್ರಿಯೆ ಸಿಗಲಿದೆ? ಎಂದು ಕಾದು ನೋಡಬೇಕಿದೆ.