ಬೆಂಗಳೂರು: ‘ಇಂದಿನ ಮಕ್ಕಳು ಇಂದಿನದೇ ಪ್ರಜೆಗಳು’ ಘೋಷಣೆಯನ್ನು ಸಂವಿಧಾನ ಸಹ ಬೆಂಬಲಿಸುತ್ತದೆ. ಮಕ್ಕಳು ಮುಂದಿನ ಪ್ರಜೆಗಳು ಎಂಬ ತಪ್ಪು ಕಲ್ಪನೆ ಇದೆ. ಹೀಗಾಗಿ ಮಕ್ಕಳ ಹಲವಾರು ಸಮಸ್ಥೆಗಳು ರಾಜ್ಯದ ಆಯವ್ಯಯದಲ್ಲಿ ಪ್ರಾಮುಖ್ಯತೆ ದೊರೆಯುತ್ತಲೇ ಇಲ್ಲ. ಆದ್ದರಿಂದ ಈ ಬಾರಿಯಾದರೂ ಮಕ್ಕಳ ಭವಿಷ್ಯ, ಮಕ್ಕಳ ಬೆಳವಣಿಗೆ, ಅವರ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರಸಕ್ತ 2025-26 ಸಾಲಿನ ‘ಕರ್ನಾಟಕ ಬಜೆಟ್’ ವೇಳೆ ಮಕ್ಕಳ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಮನವಿ ಮಾಡಲಾಗಿದೆ.
ಕರ್ನಾಟಕ ರಾಜ್ಯದ ಮಕ್ಕಳ ಪರವಾಗಿ ಬೆಂಗಳೂರಿನ ಚೈಲ್ಟ್ ರೈಟ್ಸ್ ಟ್ರಸ್ಟ್ ನಿರ್ದೇಶಕ ನಾಗಸಿಂಹ ಜಿ.ರಾವ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಹಾಗಾದರೆ ಅವರು ಮಕ್ಕಳ ಪರ ಕೋರಿರುವ ಬೇಡಿಕೆಗಳ ಅಂಶಗಳು ಏನು? ಮಕ್ಕಳ ಪರ ಸರ್ಕಾರ ಏನೆಲ್ಲ ಕ್ರಮ ಕೈಗೊಳ್ಳಬೇಕಿದೆ ಎಂದು ಇಲ್ಲಿ ತಿಳಿಯೋಣ.
ಕರ್ನಾಟಕ ಬಜೆಟ್: ಮಕ್ಕಳ ಪ್ರಮುಖ ಸಮಸ್ಯೆಗಳು
* ಮಕ್ಕಳು ಮತ್ತು ಅಂತರ್ಜಾಲ
ಅಂತರ್ಜಾಲದಿಂದ ಅಪಾರವಾದ ಉಪಯೋಗವಿದೆ. ಅದರೊಂದಿಗೆ ಹಲವು ಅಪಾಯಗಳೂ ಸಹ ಇವೆ. ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಸಿ ಹಲವಾರು ಅಪಾಯಗಳಿಗೆ ಈಡಾಗುತ್ತಿದ್ದಾರೆ. ಇದರ ಬಗ್ಗೆ ಪೋಷಕರೂ ಸಹ ಧ್ವನಿ ಎತ್ತುತ್ತಿದ್ದಾರೆ. ಹಲವಾರು ದೇಶಗಳಲ್ಲಿ ಮಕ್ಕಳಿಗೆ ಅಂತರ್ಜಾಲದ ಬಳಕೆಯನ್ನು ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲೂ ಸಹ ಹಲವು ರಕ್ಷಣಾ ಕರ್ಮಗಳನ್ನು ಕೈಗೊಳ್ಳಬೇಕು.
ಅಂತರ್ಜಾಲದ ಅತೀ ಬಳಕೆಯಿಂದ ಆಗುವ ಅಪಾಯಗಳ ಬಗ್ಗೆ ಮಕ್ಕಳಿಗೆ, ಹದಿ ಹರೆಯದವರಿಗೆ ಜಾಗೃತಿ ಮೂಡಿಸಬೇಕಿದೆ. ಈ ಕುರಿತಾಗಿ ಅಂದೋಲನಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಸಂಶೋಧನೆ ಅಗತ್ಯವಾಗಿ ಆಗಬೇಕಿದೆ. ಈ ಜಾಗೃತಿ ಕಾರ್ಯಕ್ರಮಗಳಲ್ಲಿ ಶಿಕ್ಷಣ ಇಲಾಖೆ, ಅರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಮಕ್ಕಳ ಹಿತದೃಷ್ಟಿಯಿಂದ ಆಯವ್ಯಯದಲ್ಲಿ ಈ ವಿಚಾರದ ಬಗ್ಗೆ ಗಮನ ಹರಿಸಬೇಕೆಂದು ಕೇಳಿ ಕೊಂಡಿದ್ದಾರೆ.
* ಶಾಲೆಗಳಲ್ಲಿ ಆಪ್ತ ಸಮಾಲೋಚಕರ ನೇಮಕ
ಪರೀಕ್ಷೆ ಒತ್ತಡ, ಸಾಮಾಜಿಕ ಒತ್ತಡ, ಸಾಮಾಜಿಕ ಮಾಧ್ಯಮಗಳಿಂದ ಆತಂಕ ಇನ್ನೂ ಮುಂತಾದ ಮಾನಸಿಕ ಸಮಸ್ಯೆಗಳಿಂದ ನಮ್ಮ ಮಕ್ಕಳು ಬಳಲುತ್ತಿದ್ದಾರೆ. ತಮ್ಮ ಸಮಸ್ಯೆಗಳನ್ನು ಯಾರಿಗೂ ಹೇಳಿಕೊಳ್ಳದೆ ಮನಸ್ಸಿನಲ್ಲಿಯೇ ಕೊರಗುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಉಂಟಾದ ಸಾಮಾಜಿಕ ಆತಂಕದಿಂದ ಹಲವಾರು ಮಕ್ಕಳು ಇನ್ನೂ ಹೊರಬಂದಿಲ್ಲ. ತಮ್ಮ ಮಕ್ಕಳು ಮಾನಸಿಕ ಸಮಸ್ಯೆ ಇಂದ ಬಳಲುತ್ತಿದ್ದಾರೆ ಎಂದು ಪೋಷಕರು ಹೇಳಲು ಹಿಂಜರಿಯುತ್ತಾರೆ. ಇದರಿಂದ ಸಾಮಾಜಿಕ ಕಳಂಕ ಬರುತ್ತದೆ ಎಂಬ ಆತಂಕ ಪೋಷಕರದ್ದು.
ಪೋಷಕರನ್ನು ಈ ಆತಂಕದಿಂದ ರಕ್ಷಿಸಿ ಮಕ್ಕಳ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರತಿ ಶಾಲೆಯಲ್ಲೂ ಅತ್ಸಮಾಲೋಚಕರು ಇರುವುದು ಅಗತ್ಯವಾಗಿದೆ. ಪ್ರತಿ ಶಾಲೆಗಳಿಗೆ
ಆಪ್ತಸಮಾಲೋಚಕರನ್ನು ನೇಮಿಸಬೇಕು. ಅವರಿಗೆ ಸೂಕ್ತ ಸಂಬಳವನ್ನು ಈ ಆಯವ್ಯಯದಲ್ಲಿ ನಿಗದಿಪಡಿಸಬೇಕು.
* ಪೋಕ್ಸೋ ಪ್ರಕರಣಗಳು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಪ್ರಕರಣಗಳು ಕಳೆದ ವರ್ಷದಿಂದ ಬಾಲ ಗರ್ಭಿಣಿಯರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇವೆ. ಹದಿಹರೆಯದ ಮಕ್ಕಳಿಗೆ ಲೈಂಗಿಕ ವಿಚಾರಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಬಾಲ ಗರ್ಭಿಣಿಯರ ಪುನರ್ವಸತಿಗೆ ಸೂಕ್ತ ಹಣದ ಅಗತ್ಯತೆ ಇದೆ. ಆದ್ದರಿಂದ ಸರ್ಕಾರ ಸದರಿ ಬಜೆಟ್ನಲ್ಲಿ ಪೋಕ್ಸೋ ಕಾಯಿದೆಯ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಲು ಸೂಕ್ತ ಹಣ ಹಂಚಿಕೆ ಮಾಡಬೇಕು. * ಬಾಲ್ಯ ವಿವಾಹ ಪಿಡುಗಿಗೆ ಮುಕ್ತಿ ಕೊಡಿ ಬಾಲ್ಯ ವಿವಾಹ ಪದ್ಧತಿಯು ಇಂದು ಸಾಮಾಜಿಕ ಪಿಡುಗು ಮಾತ್ರವಾಗಿರದೆ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯಿದೆ 2006 ಜಾರಿಯಲ್ಲಿದ್ದರೂ ಇನ್ನು ಬಾಲ್ಯವಿವಾಹಗಳು ಆಗುತ್ತಿವೆ. ಇತ್ತೀಚಿಗೆ ಸರ್ಕಾರ ಪಿಯು ಕಾಲೇಜುಗಳ ಪ್ರಾಂಶುಪಾಲರನ್ನೂ ಸಹ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳನ್ನಾಗಿ ನೇಮಿಸಿದೆ. ಈಗಾಗಲೇ ಇರುವ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಿಗೆ ಸೂಕ್ತವಾದ ತರಬೇತಿ ಹಾಗೂ ಪ್ರೋತ್ಸಾಹ ಧನ ನೀಡಬೇಕು ಎಂದು ಕೋರಿದ್ದಾರೆ. * ಅಂಗವಿಕಲ ಮಕ್ಕಳಿಗೆ ಅಗತ್ಯ ವ್ಯವಸ್ಥೆ ಭಾರತದಲ್ಲಿ 2006ರ ಅಂಗವಿಕಲ ವ್ಯಕ್ತಿಗಳ ಹಕ್ಕು ಕಾಯಿದೆಯ ಪ್ರಕಾರ 21 ರೀತಿಯ ಅಂಗವಿಕಲತೆಗಳನ್ನು ಗುರುತಿಸಲಾಗಿದೆ. ನಮ್ಮ ರಾಜ್ಯದಲ್ಲಿ ಸಮನ್ವಯ ಶಿಕ್ಷಣ ಇದ್ದರೂ ಹಲವಾರು ಪೋಷಕರು ತಮ್ಮ ಅಂಗವಿಕಲ ಮಕ್ಕಳನ್ನು ಶಾಲೆಗೆ ದಾಖಲೆ ಮಾಡುವುದೇ ಇಲ್ಲ. ಗೃಹ ಶಿಕ್ಷಣಕ್ಕಾಗಿ ಇದ್ದ ವಿಶೇಷ ಶಿಕ್ಷಕರ ಸಂಖ್ಯೆ ಕಡಿಮೆ ಯಾಗಿದೆ. ಮಕ್ಕಳಲ್ಲಿರುವ ಕಲಿಕಾ ನ್ಯೂನತೆಗಳನ್ನು ಪತ್ತೆ ಮಾಡಬೇಕಾದ ಅಗತ್ಯವಿದೆ. ಶ್ರವಣ ದೋಷ, ದೃಷ್ಟಿ ದೋಷ ಇರುವ ಮಕ್ಕಳಿಗೆ ಪಠ್ಯಗಳನ್ನು ಸಿದ್ಧಪಡಿಸುವ ಅಗತ್ಯವಿದೆ. ಅಂಗವಿಕಲ ಮಕ್ಕಳ ಪುನರ್ವಸತಿಗೆ, ಚಿಕಿತ್ಸೆಗೆ, ಶಿಕ್ಷಣಕ್ಕೆ ಮತ್ತಷ್ಟು ಹಣವನ್ನು ಮೀಸಲಿರಿಸಬೇಕು. ಮಕ್ಕಳ ಸಮಸ್ಯೆಗಳು ಇನ್ನೂ ಹಲವಾರು ಇವೆ. ನಮ್ಮ ರಾಷ್ಟ್ರೀಯ ಮಕ್ಕಳ ನೀತಿ 2013 ಮಕ್ಕಳನ್ನು ರಾಷ್ಟ್ರದ ಸಂಪತ್ತು ಎಂದು ಬಣ್ಣಿಸಿದೆ. ನಮ್ಮ ಮಕ್ಕಳನ್ನು ರಾಷ್ಟ್ರದ ಸಂಪನ್ಮೂಲಗಳನ್ನಾಗಿಸಲು ಸೂಕ್ತವಾದ ಹಣವನ್ನು ಮೀಸಲಿಡಬೇಕಿದೆ. ಮೇಲಿನ ಸಮಸ್ಯೆಗಳನ್ನು ಗಮನಿಸಿ 2025-26ರ ರಾಜ್ಯ ಆಯವ್ಯಯದಲ್ಲಿ ಮಕ್ಕಳ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಮಾರ್ಚ್ 7ಕ್ಕೆ ಕರ್ನಾಟಕ ಬಜೆಟ್ ಮಂಡನೆ ಸದ್ಯ ಪಂಚ ಯೋಜನೆಗಳ ಜಾರಿಯಿಂದ ಕೆಲವು ಆರ್ಥಿಕ ಅರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರ ಮಕ್ಕಳ ಏಳಿಗೆ ಕುರಿತು ಏನೆಲ್ಲ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಸದ್ಯ ರಾಜ್ಯ ಬಜೆಟ್ ಅನ್ನು ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿದ್ದಾರೆ. ಮಾರ್ಚ್ 3ರಿಂದ ಬಜೆಟ್ ಅಧಿವೇಶ ಆರಂಭವಾಗಲಿದೆ.