ಬೆಂಗಳೂರು || ಬೆಂಗಳೂರು ಸೇರಿ ಈ 9 ಕಡೆ ಗಗನಚುಂಬಿ ಕಟ್ಟಡಗಳಿಗೆ ಗ್ರೀನ್ ಸಿಗ್ನಲ್, ಯಾರಿಗೆಲ್ಲ ಲಾಭ?

ಬೆಂಗಳೂರು || ಬೆಂಗಳೂರು ಸೇರಿ ಈ 9 ಕಡೆ ಗಗನಚುಂಬಿ ಕಟ್ಟಡಗಳಿಗೆ ಗ್ರೀನ್ ಸಿಗ್ನಲ್, ಯಾರಿಗೆಲ್ಲ ಲಾಭ?

ಬೆಂಗಳೂರು : ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ರಾಜ್ಯ ಸರ್ಕಾರವು ಹಲವು ಮಹತ್ವದ ನಿಯಮಗಳನ್ನು ರೂಪಿಸಿದೆ. ಇದೀಗ ಮಹಡಿ ಪ್ರದೇಶ ಅನುಪಾತದ (FAR) ಮೇಲಿನ ಮಿತಿಯನ್ನು ಕೂಡ ಶೇ 60ರಷ್ಟು ಹೆಚ್ಚಿಸುವ ಮೂಲಕ ಬಿಲ್ಡರ್ಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಇದರಿಂದ ಬೆಂಗಳೂರು ಸೇರಿದಂತೆ ಪ್ರಮುಖ ಒಂಬತ್ತು ಉಪನಗರಗಳಲ್ಲಿ ಗಗನಚುಂಬಿ ಕಟ್ಟಡಗಳ ಸಂಖ್ಯೆ ಕೂಡ ಹೆಚ್ಚಾಗಲಿದೆ ಎಂದು ವರದಿ ಮಾಡಿದೆ.

ಈ ಹೊಸ ನಿಯಮದಿಂದ ವಲಯ ನಿಯಮಾವಳಿಗಳಲ್ಲಿನ ತಿದ್ದುಪಡಿಯಿಂದ ಬಿಲ್ಡರ್ಗಳು ಈಗಿರುವ ಮೌಲ್ಯದ ಕೇವಲ ಶೇ 28ರಷ್ಟನ್ನು ಪಾವತಿಸುವ ಮೂಲಕ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಅನುವು ಮಾಡಿಕೊಡಲಿದೆ. ಹಾಗಾಗಿ ಬೆಂಗಳೂರು ಒಳಗೊಂಡಂತೆ ಕನಕಪುರ, ನೆಲಮಂಗಲ, ಹೊಸಕೋಟೆ ಸೇರಿದಂತೆ ಒಂಬತ್ತು ಉಪನಗರ ಪ್ರದೇಶಗಳಲ್ಲಿ ಗಗನಚುಂಬಿ ಕಟ್ಟಡಗಳು ಶೀಘ್ರವಾಗಿ ಹೆಚ್ಚಾಗಲಿವೆ ಎಂದು ಹೇಳಲಾಗುತ್ತಿದೆ.

ಮುಖ್ಯವಾಗಿ ಈ ನಿಯಮವು ದೊಡ್ಡ ಜಮೀನು ಹೊಂದಿರುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಫೆಬ್ರವರಿ 21ರಿಂದ ಜಾರಿಗೆ ಬರುವ ಈ ಪರಿಷ್ಕೃತ ನೀತಿಯನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯಿದೆ 1961ರ ಸೆಕ್ಷನ್ 13-ಇ ಅಡಿಯಲ್ಲಿ ಪರಿಚಯಿಸಲಾಯಿತು. ಒಂದೂವರೆ ತಿಂಗಳ ನಂತರ ಅಧಿಕೃತ ಗೆಜೆಟ್ ಮೂಲಕ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸಹ ಆಹ್ವಾನಿಸಲಾಗಿದೆ.

ಯಾವ ಪ್ರದೇಶಕ್ಕೆ ಇದರಿಂದ ಅನುಕೂಲ? ರಾಜ್ಯ ಸರ್ಕಾರದ ಈ ಹೊಸ ನಿಯಮದಿಂದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರ, ಆನೇಕಲ್, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ನೆಲಮಂಗಲ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶಗಳಂತಹ ಪ್ರಾಧಿಕಾರಗಳ ಆಡಳಿತದಲ್ಲಿರುವ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅನುಕೂಲವಾಗಲಿದೆ.

ಮುಖ್ಯವಾಗಿ 5,000 ಚದರ ಅಡಿಗಿಂತಲೂ ದೊಡ್ಡದಾದ ಯೋಜನೆಗಳಿಗೆ ಈ ನಿಯಮವು ತುಂಬಾ ಪ್ರಯೋಜನ ನೀಡಲಿದೆ. ಅಲ್ಲದೆ ಕಟ್ಟಡ ನಿರ್ಮಾಣದಲ್ಲಿನ ಈ ಬದಲಾವಣೆಯಿಂದಾಗಿ ಜಂಟಿ ಅಭಿವೃದ್ಧಿ ಯೋಜನೆಗಳು ಹಾಗೂ ಸಣ್ಣ ಆಸ್ತಿಗಳ ವಿಲೀನವನ್ನು ಕೂಡ ಉತ್ತೇಜಿಸುವ ಸಾಧ್ಯತೆ ಇದೆ. ಬಿಲ್ಡರ್ಗಳು ಈಗ ಮಹಡಿ ಪ್ರದೇಶ ಅನುಪಾತವನ್ನು (ಎಫ್ಎಆರ್) ಎರಡು ಘಟಕಗಳಿಗೆ ಸುಲಭವಾಗಿ ಬಳಸಬಹುದು.

ಇದು ರಸ್ತೆಯ ಅಗಲ ಮತ್ತು ಆಸ್ತಿಯ ಗಾತ್ರವನ್ನು ಅವಲಂಬಿಸಿ, ಶೇ 40ರಷ್ಟು ಅನುಮತಿಸುತ್ತದೆ. ಅಲ್ಲದೆ ಸಾರ್ವಜನಿಕ ಯೋಜನೆಗಳಿಗಾಗಿ ಭೂಮಿ ನೀಡುವ ಆಸ್ತಿ ಮಾಲೀಕರ ಟಿಡಿಆರ್ ಬಳಸಿಕೊಂಡು ಮತ್ತೊಂದು ಕಡೆ ಶೇ 20ರಷ್ಟು ಮಹಡಿ ಪ್ರದೇಶ ಅನುಪಾತವನ್ನು ಬಳಸಿಕೊಳ್ಳಬಹುದಾಗಿದೆ. ಹೊಸ ನೀತಿಯಿಂದಾಗಿ ಬಿಲ್ಡರ್ ಹೆಚ್ಚುವರಿ 10,000 ಚದರ ಮೀಟರ್ ನಿರ್ಮಾಣಕ್ಕಾಗಿ ಪ್ರತಿ ಚದರ ಮೀಟರ್ಗೆ 1,400 ರೂಪಾಯಿ ಪಾವತಿಸುವ ಮೂಲಕ ಎರಡು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಬಹುದು. ಇದರಿಂದ ಬಿಲ್ಡರ್ಗೆ 1.4 ಕೋಟಿ ರೂಪಾಯಿ ಖರ್ಚು ಬರಲಿದೆ. ಈ ಹೊಸ ನೀತಿಯು ಕೃಷಿ ಅಥವಾ ಅಭಿವೃದ್ಧಿಯಾಗದ ಭೂಮಿಯ ಮೌಲ್ಯದ ಕಟ್ಟಡ ಸೈಟ್ಗಳಿಗೆ ಅನ್ವಯಿಸುವುದಿಲ್ಲ. ಕಟ್ಟಡದ ಯೋಜನೆಯನ್ನು ಅನುಮೋದಿಸುವ ಮೊದಲು ಪ್ರೀಮಿಯಂ ಎಫ್ಎಆರ್ ಪ್ರಮಾಣಪತ್ರವನ್ನು ಒಪ್ಪಿಸಬೇಕು ಎಂದು ನಿಯಮದಲ್ಲಿ ತಿಳಿಸಿದೆ. ಎತ್ತರದ ನಿರ್ಬಂಧಗಳಿಂದಾಗಿ 20×30 ಅಥವಾ 40×60 ನಂತಹ ಸಣ್ಣ ಪ್ಲಾಟ್ಗಳಿಗೆ ಇಲ್ಲಿವರೆಗೆ ಕಠಿಣ ನಿಯಮಗಳಿತ್ತು. ಅಧಿಕಾರಿಗಳು ಲಂಚ ಪಡೆದು ಅಕ್ರಮ

ಕಟ್ಟಡ ನಿರ್ಮಾಣಗಳಿಗೆ ಅವಕಾಶ ಮಾಡಿಕೊಡುತ್ತಿದ್ದು, ಇದಕ್ಕೂ ಕಡಿವಾಣ ಹಾಕಬೇಕು ಎಂಬ ಒತ್ತಾಯವಿದೆ.

Leave a Reply

Your email address will not be published. Required fields are marked *