ಬೆಂಗಳೂರು || ಬಿಬಿಎಂಪಿ ಮೇಲೆ ಬಿಲ್ಡರ್ಗಳಿಂದಲೇ ವಾಮಾಚಾರ?

ಬೆಂಗಳೂರು || ಬಿಬಿಎಂಪಿ ಮೇಲೆ ಬಿಲ್ಡರ್ಗಳಿಂದಲೇ ವಾಮಾಚಾರ?

ಬೆಂಗಳೂರು : ವಾಮಾಚಾರವನ್ನು ಮೂಢನಂಬಿಕೆ ಎಂದು ಕರೆದರೂ ಹಿಂದಿನ ಕಾಲದಿಂದಲೂ ಇದು ಚಾಲ್ತಿಯಲ್ಲಿದೆ. ಮೊದಲೆಲ್ಲ ಜನರ ಏಳಿಗೆ ಸಹಿಸದೆ, ಅವರ ನೆಮ್ಮದಿ ಹಾಳು ಮಾಡಲು ಮಾಟ-ಮಂತ್ರ, ವಾಮಾಚಾರದ ಪ್ರಯೋಗಗಳನ್ನು ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಲೂ ವಾಮಾಚಾರ ನಡೆದಿದೆ ಎಂಬ ವಿಚಾರ ಬೆಚ್ಚಿಬೀಳಿಸಿದೆ. ಈ ಕೆಲಸ ಬಿಲ್ಡರ್ಗಳಿಂದ ನಡೆದಿದೆ ಎಂದು ಆರೋಪವೂ ಕೇಳಿಬರುತ್ತಿದೆ.

ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣದ ವಿರುದ್ಧ ಬಿಬಿಎಂಪಿ ಸಮರ ಸಾರಿದೆ. ಇದು ಬಿಲ್ಡರ್ಗಳ ಪಾಲಿಗೆ ದೊಡ್ಡ ತಲೆನೋವಾಗಿದೆ. ಕೆಲ ಬಿಲ್ಡರ್ಗಳು ಅನಧಿಕೃತವಾಗಿಯೇ ಕಟ್ಟಡಗಳ ನಿರ್ಮಾಣ ಮಾಡಿ ಲೂಟಿ ಹೊಡೆಯುತ್ತಿದ್ದಾರೆ. ಈಗ ದಿಢೀರನೆ ಬಿಬಿಎಂಪಿಯ ಕ್ರಮದಿಂದ ಬಿಲ್ಡರ್ಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಹಾಗಾಗಿ ತಮ್ಮ ದಾರಿಗೆ ಅಡ್ಡಗಾಲು ಹಾಕುತ್ತಿರುವ ಬಿಬಿಎಂಪಿ ಮೇಲೆಯೇ ವಾಮಾಚಾರದ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಕೆ.ಆರ್.ಪುರ ಭಾಗದಲ್ಲೂ ಬಿಬಿಎಂಪಿಯು ಅನಧಿಕೃತ ನಿರ್ಮಾಣಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಈ ಕೆಲಸಕ್ಕೆ ಅಡ್ಡಿಪಡಿಸಬೇಕು ಎಂಬ ಉದ್ದೇಶದಿಂದ ಕೆಆರ್ ಪುರದ ಬಸವನಪುರ ಪ್ರದೇಶದಲ್ಲಿ ಬಿದಿರಿನ ಮರಗಳನ್ನು ವಿಕೃತಿಯಾಗಿ ಕತ್ತರಿಸಿ ವಾಮಾಚಾರದ ಪ್ರಯೋಗ ಮಾಡಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಈಗಾಗಲೇ ಅನಧಿಕೃತ ನಿರ್ಮಾಣದ ವಿಚಾರವಾಗಿ ಬಿಲ್ಡರ್ಗಳಿಗೆ ಬಿಬಿಎಂಪಿ ನೋಟಿಸ್ ನೀಡಿದ್ದಾರೆ. ಇದರಿಂದ ಆತಂಕಗೊಂಡು ಬಿಲ್ಡರ್ಗಳೇ ವಾಮಾಚಾರದ ಮೊರೆ ಹೋಗಿದ್ದಾರೆ. ತಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಪಾರಾಗಲು ಈ ಮಾರ್ಗ ಹಿಡಿದಿದ್ದಾರೆ. ಇಲ್ಲಿನ ಬಿದಿರಿನ ಮರಗಳ ಬಳಿ ಬೆಳ್ಳಿ ಹಾಗೂ ತಾಮ್ರದ ಹಾಳೆಗಳನ್ನು ಸುತ್ತಲಾಗಿದೆ. ಇದರಲ್ಲಿ ಕೆಲವು ಟಿಪ್ಪಣಿಗಳು ಕೂಡ ಇವೆ. ಇದನ್ನು ಮರದ ಕೆಳಗೆ ಸುತ್ತಿ, ಮೇಲೆ ಮರವನ್ನು ಕಟ್ ಮಾಡಲಾಗಿದೆ ಎಂದು ಸ್ಥಳೀಯರು ವಿವರಿಸಿದ್ದಾರೆ.

ಈ ಭಾಗದಲ್ಲಿ ಈಗಾಗಲೇ ಅಕ್ರಮ ವಸತಿಗಳನ್ನು ಹೊಂದಿರುವ ಬಿಲ್ಡರ್ಗಳೇ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಈಗಾಗಲೇ ಇಲ್ಲಿ ಅಕ್ರಮವಾಗಿ ಅಪಾರ್ಟ್ಮೆಂಟ್ಗಳನ್ನು ಕಟ್ಟಿ, ಕೋಟ್ಯಂತರ ರೂಪಾಯಿ ಲಪಟಾಯಿಸಿದ್ದಾರೆ. ಈಗ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಿಬಿಎಂಪಿ ಕ್ರಮದಿಂದ ಅವರಿಗೆ ಭಾರಿ ಹಿನ್ನಡೆಯಾಗುವ ಭೀತಿಯಲ್ಲಿ ವಾಮಾಚಾರದ ಮೊರೆ ಹೋಗಿರುವುದಾಗಿ ತಿಳಿದುಬಂದಿದೆ.

ಇಲ್ಲಿನ ವಾಮಾಚಾರವನ್ನು ಗಮನಿಸಿದರೆ ಇದು ಆಂಧ್ರಪ್ರದೇಶದಲ್ಲಿ ಮಾಡಿಸಿದಂತೆ ತೋರುತ್ತಿದೆ. ಮರದಲ್ಲಿರುವ ಹಾಳೆಗಳಲ್ಲಿ ಈ ಭಾಗದಲ್ಲಿರುವ ಪ್ರಮುಖರ ಹೆಸರಿದೆ. ಬೆಳ್ಳಿ ಮತ್ತು ತಾಮ್ರದ ಹಾಳೆಗಳಲ್ಲಿ ತೆಲುಗು ಭಾಷೆಯಲ್ಲಿ ಕೆಲವು ಶಾಸನಗಳನ್ನು ಬರೆಯಲಾಗಿದ್ದು, ವಿಚಿತ್ರವಾಗಿದೆ. ಇದರಲ್ಲಿ ಕೆಲವು ಸೂಚನೆಗಳನ್ನು ಕೂಡ ನೀಡಲಾಗಿದೆ. ಈ ರೀತಿ ಕೃತ್ಯ ಎಸಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಇಲ್ಲಿನ ಸ್ಥಳೀಯರು ಮನವಿ ಮಾಡಿದ್ದಾರೆ. ಈ ವಿಚಾರವನ್ನು ಬಿಬಿಎಂಪಿ ಅಧಿಕಾರಿಗಳಿಗೂ ತಿಳಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ.

Leave a Reply

Your email address will not be published. Required fields are marked *