ಬೆಂಗಳೂರು: ಬೆಂಗಳೂರಿನಲ್ಲಿ ಇರುವವರಿಗೆ ಹಾಗೂ ಸೈಡ್ಲೈನ್ ಆದಾಯ ಮಾಡಿಕೊಳ್ಳಬೇಕು ಎನ್ನುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇ -ಖಾತಾದ ಮೂಲಕ ಗುಡ್ನ್ಯೂಸ್ ಕೊಟ್ಟಿದೆ. ಹೌದು ಆದರೆ ಇದೇ ಸಂದರ್ಭದಲ್ಲಿ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳಿಂದ ಇ -ಖಾತಾ ನೀಡಲು ಸಾಧ್ಯವಾಗುತ್ತಿಲ್ಲ. ಇ -ಖಾತಾ ನೀಡುವುದು ಸವಾಲಾಗಿ ಪರಿಣಮಿಸಿದೆ ಎನ್ನುವ ವಿಷಯವನ್ನೂ ಬೆಂಗಳೂರು ಪಾಲಿಕೆ ಒಪ್ಪಿಕೊಂಡಂತಾಗಿದೆ. ನಗರದಲ್ಲಿ ಕಳೆದ ಐದು ತಿಂಗಳಿನಿಂದಲೂ ಇ – ಖಾತೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಮುಖ್ಯವಾಗಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದವರನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರಲು ಸರ್ಕಸ್ ನಡೆದಿದೆ. ಇದೀಗ ನೀವು ಖಾತಾದ ಮೂಲಕ ಆದಾಯ ಮಾಡಿಕೊಳ್ಳುವ ಐಡಿಯಾವನ್ನು ಬಿಬಿಎಂಪಿ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇದೇ ಮೊದಲ ಬಾರಿ ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಮಹತ್ವದ ಯೋಜನೆಯಲ್ಲಿ ಶಾಮೀಲಾಗುವುದಕ್ಕೆ ಅವಕಾಶ ನೀಡುತ್ತಿದೆ. ಇದರಿಂದ ನೀವು ಸಾವಿರಾರು ರೂಪಾಯಿ ಆದಾಯ ಗಳಿಸುವುದಕ್ಕೆ ಅವಕಾಶ ಇದೆ. ಹೌದು ಬೆಂಗಳೂರಿನಲ್ಲಿ ಬರೋಬ್ಬರಿ 24 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಈ ಆಸ್ತಿಗಳಿಗೆ ಇ -ಖಾತೆ ನೀಡುವುದನ್ನು ಅಂದರೆ ಡಿಜಿಟಲ್ ಖಾತೆ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಇಲ್ಲಿಯ ವರೆಗೆ ಇಷ್ಟೊಂದು ಆಸ್ತಿಗಳಲ್ಲಿ ಶೇ 50ರಷ್ಟು ಆಸ್ತಿಗಳಿಗೆ ಸಹ ಇ – ಖಾತಾ ನೀಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಜನರಿಗೆ ಖಾತಾ ಮಾಡಿಕೊಟ್ಟರೆ ದುಡ್ಡು ಕೊಡುವುದಾಗಿ ಬಿಬಿಎಂಪಿ ಹೇಳಿದೆ. ಅದರ ಮಾಹಿತಿ ಮುಂದೆ ನೋಡೋಣ..
ಈಗಾಗಲೇ ಹೇಳಿದಂತೆ ಎಲ್ಲಾ ಆಸ್ತಿಗಳ ಸಂರಕ್ಷಣೆ, ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿಸುವುದು ಹಾಗೂ ಆಸ್ತಿ ಮಾರಾಟ ಮತ್ತು ಖರೀದಿಯಲ್ಲಿ ಯಾವುದೇ ಲೋಪವಾಗದಂತೆ ತಡೆಯವ ಉದ್ದೇಶದಿಂದ ಇ -ಖಾತಾ ಜಾರಿ ಮಾಡಲಾಗಿದೆ. ಆದರೆ, ಬೇಡಿಕೆಗೆ ಅನುಗುಣವಾಗಿ ಆಸ್ತಿದಾರರಿಗೆ ಇ -ಖಾತಾ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಇದೀಗ ಜನರಿಗೂ ಇ -ಖಾತಾ ಮಾಡಿಸುವ ಅವಕಾಶ ನೀಡಲಾಗಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ನಿರ್ದೇಶನದ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಪ್ರತಿ ಇ -ಖಾತಾಗೆ 45 ರೂಪಾಯಿ ನಿಗದಿ ಮಾಡಿದ ಪಾಲಿಕೆ! ಬಿಬಿಎಂಪಿಯು ಇದೇ ಮೊದಲ ಬಾರಿ ಇ -ಖಾತಾದ ಮೂಲಕ ಆದಾಯ ಮಾಡಿಕೊಳ್ಳುವ ಮಾರ್ಗವನ್ನು ಪರಿಚಯಿಸಿದೆ. ಬಿಬಿಎಂಪಿಯಲ್ಲಿ ಯುವ ಉದ್ಯಮಿ/ಸ್ಥಳೀಯ ಉದ್ಯಮಿಯಾಗಿ ಆನ್ಲೈನ್ನಲ್ಲಿ ನೋಂದಾಯಿಸಿ ಮತ್ತು ಸಾರ್ವಜನಿಕರಿಗೆ ಇ-ಖಾತಾ ಸೇವೆಗಳನ್ನು ನೀಡುವುದರ ಮೂಲಕ ಪ್ರತಿ ಇ-ಖಾತಾಗೆ 45 ರೂಪಾಯಿ ಗಳಿಸಬಹುದಾಗಿದೆ ಎಂದು ಹೇಳಿದೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ದೂರದೃಷ್ಟಿಯಂತೆ, ನೀವು ಸ್ಥಳೀಯ ಉತ್ಸಾಹಿ ವ್ಯಕ್ತಿಯಾಗಿದ್ದರೆ. ಕೆಲಸ ಮಾಡುವ ಉತ್ಸಾಹ ಹೊಂದಿದಲ್ಲಿ ಬಿಬಿಎಂಪಿಯೊಂದಿಗೆ ಆನ್ಲೈನ್ನಲ್ಲಿ ನೋಂದಾಯಿಸಿಕೊಂಡು ಸಾರ್ವಜನಿಕರಿಗೆ ಬಿಬಿಎಂಪಿ ಇ-ಖಾತಾ ಸೇವೆಗಳನ್ನು ನೀಡುವುದಕ್ಕೆ ಅವಕಾಶ ಇದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.