ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಈಗಾಗಲೇ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಗುರುತಿಸಲಾಗಿದೆ. ಈ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ವಹೀವಾಟಿಗೆ ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಗುರುತಿನ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನಿರ್ದೇಶಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳ ಕುರಿತು ಪಾಲಿಕೆ ಕೇಂದ್ರ ಕಛೇರಿಯಲ್ಲಿ ಸೋಮವಾರ (ಮಾರ್ಚ್ 03) ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಸುಮಾರು 27,000 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಎಲ್ಲರಿಗೂ ಆದಷ್ಟು ಶೀಘ್ರವೇ ಗುರುತಿನ ಚೀಟಿ ವಿತರಣೆ ಮಾಡಬೇಕು ಎಂದು ಅವರು ಸೂಚಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಯಾವ ಮಾದರಿಯಲ್ಲಿ ಇರಬೇಕು ಎಂಬುದನ್ನು ಅಂತಿಮಗೊಳಿಸಿ, ಎಲ್ಲರಿಗೂ ಗುರುತಿನ ಚೀಟಿ ನೀಡಬೇಕು. ಆ ಬಳಿಕ ಗುರುತಿಸಿರುವಂತಹ ವ್ಯಾಪಾರ ವಲಯಗಳಲ್ಲಿ, ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕೆಂದು ಸೂಚಿಸಿದರು.
ಶಾಲೆಗಳಿಂದ ಹೊರಗುಳಿದ ಮಕ್ಕಳು: ಸಮೀಕ್ಷೆ ನಡೆಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವಲಯವಾರು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಈ ಪೈಕಿ ಆಯಾ ವಲಯ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಕಾರ್ಯ ಪರಿಣಾಮಕಾರಿಯಾಗಿ ನಡೆಸುವುದರ ಜೊತೆಗೆ ತ್ವರಿತಗತಿಯಲ್ಲಿ ಗುರುತಿಸುವ ಕಾರ್ಯವನ್ನು ನಡೆಸಲು ನಿರ್ದೇಶಿಸಿದರು.
ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಕಲ್ಯಾಣ ವಿಭಾಗದಡಿ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಪೈಕಿ ಯಾವ ಯಾವ ಕಾರ್ಯಕ್ರಮಗಳಿಗೆ ಎಷ್ಟು ಅರ್ಜಿಗಳು ಬಂದಿವೆ ಎಂಬುದನ್ನು ವಲಯವಾರು ಪರಿಶೀಲಿಸಬೇಕು. ಆ ಬಳಿಕ ಅರ್ಹ ಫಲಾನುಭವಿಗಳಿಗೆ ಕಾರ್ಯಕ್ರಮಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಬಿಬಿಎಂಪಿ ವ್ಯಾಪ್ತಯ ವಿಷಯಗಳ ಕುರಿತು ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸತೀಶ್, ಅರ್ಚನಾ, ರಮ್ಯಾ, ಕರೀಗೌಡ, ಸ್ನೇಹಲ್ ಹಾಗೂ ಅಭಿಯಂತರರ ಜೊತೆಗೆ ಚರ್ಚಿಸಿ ಸೂಕ್ತ ತಿರ್ಮಾನ ಕೈಗೊಳ್ಳಲಾಯಿತು.