ಬೆಂಗಳೂರು || ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಎದುರಾಯ್ತು ದೊಡ್ಡ ವಿಘ್ನ

ಬೆಂಗಳೂರು || ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಎದುರಾಯ್ತು ದೊಡ್ಡ ವಿಘ್ನ

ಬೆಂಗಳೂರು: ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಇದೇ ಏಪ್ರಿಲ್ 4ರಿಂದ ಏಪ್ರಿಲ್ 14ರವರೆಗೆ ಕರಗದ ಆಚರಣೆಗಳು ನಡೆಯಲಿವೆ. ಏಪ್ರಿಲ್ 12ರ ಚೈತ್ರ ಪೌರ್ಣಮಿ ಅದ್ಧೂರಿ ಕರಗ ಶಕ್ತ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಈ ಬಾರಿಯೂ ಕರಗದ ಪೂಜಾರಿ ಎ.ಜ್ಞಾನೇಂದ್ರ ಅವರೇ ಕರಗ ಹೊರಲು ರೆಡಿಯಾಗಿದ್ದಾರೆ. ಆದರೆ, ಈ ಬಾರಿಯ ಕರಗ ಮಹೋತ್ಸವಕ್ಕೆ ದೊಡ್ಡ ವಿಘ್ನ ಎದುರಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಡಿರುವ ಕೆಲಸದಿಂದಾಗಿ ಇದೀಗ ಕರಗದ ಆಚರಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಪ್ರತಿ ವರ್ಷವೂ ಈ ಕರಗ ಮಹೋತ್ಸವಕ್ಕೆ ಲಕ್ಷಾಂತರ ಜನ ಸೇರುತ್ತಾರೆ. ಈ ಬಾರಿಯೂ ಕರಗ ಮಹೋತ್ಸವದಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ ಇದೆ. ಹೀಗಾಗಿ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಈ ಬಾರಿಯ ಕರಗಕ್ಕೆ ಬಿಬಿಎಂಪಿಯೇ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಬಿಬಿಎಂಪಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಅಪೂರ್ಣಗೊಂಡಿರುವುದು.

ಹೌದು, ಕರಗ ಶಕ್ತ್ಯೋತ್ಸವ ನಡೆಯುವ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿಯ ಪ್ರಮುಖ ರಸ್ತೆಗಳು, ಎಸ್.ಪಿ.ರೋಡ್ ಸೇರಿದಂತೆ ಕರಗ ಸಂಚರಿಸುವ ಮಾರ್ಗಗಳಲ್ಲಿ ಬಿಬಿಎಂಪಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಹಲವು ತಿಂಗಳಿನಿಂದ ಇಲ್ಲಿ ಕಾಮಗಾರಿಗಳು ನಡೆಯುತ್ತಿದ್ದರೂ ವೇಗವಾಗಿ ಸಾಗಿಲ್ಲ. ಅಲ್ಲಲ್ಲಿ ಒಳಚರಂಡಿ ಹಾಗೂ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಕೆಲಸಗಳು ಅರ್ಧಕ್ಕೆ ನಿಂತುಬಿಟ್ಟಿವೆ. ಕರಗಕ್ಕೆ ಹೆಚ್ಚು ಜನ ಸೇರುವ ಈ ಸ್ಥಳಗಳಲ್ಲಿ ಕಾಮಗಾರಿಗಳು ಅಪೂರ್ಣಗೊಂಡಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕರಗ ಮಹೋತ್ಸವಕ್ಕೆ ಇನ್ನು ಒಂದು ತಿಂಗಳೂ ಇಲ್ಲ. ಆದರೂ ಕಾಮಗಾರಿಗಳು ಪೂರ್ಣಗೊಳ್ಳದಿರುವುದು ಆತಂಕ ಮೂಡಿಸಿದೆ. ಬಿಬಿಎಂಪಿಯ ಈ ಕಾಮಗಾರಿಗಳು ಇನ್ನೂ ಹಲವು ತಿಂಗಳ ಕಾಲ ನಡೆಯುವ ಸ್ಥಿತಿಯಲ್ಲಿದ್ದು, ಕರಗದ ವೇಳೆಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ. ಇದು ಕರಗದ ನಡೆಸುವ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಗೂ ಆತಂಕ ಮೂಡಿಸಿದೆ. ಕರಗ ವೀಕ್ಷಿಸಲು ಲಕ್ಷಾಂತರ ಮಂದಿ ಆಗಮಿಸುವುದರಿಂದ ಇಲ್ಲಿನ ರಸ್ತೆಗಳಲ್ಲಿ ಜನಜಂಗುಳಿ ಇರುತ್ತದೆ. ಕಾಮಗಾರಿಗಳಿಂದಾಗಿ ಭಕ್ತರು ಹಾಗೂ ಕರಗದ ವೀಕ್ಷಕರಿಗೆ ಸಮಸ್ಯೆಯಾಗಲಿದೆ ಎಂದು ಹೇಳಲಾಗುತ್ತಿದೆ.

ತಿಗಳರ ಪೇಟೆಯಲ್ಲಿರುವ ಶ್ರೀಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಹತ್ತು ದಿನಗಳಿಗೂ ಹೆಚ್ಚಿನ ಕಾಲ ಕರಗದ ಆಚರಣೆಗಳು ನಡೆಯುತ್ತವೆ. ಲಕ್ಷಾಂತರ ಮಂದಿ ಕರಗವನ್ನು ಕಣ್ತುಂಬಿಕೊಳ್ಳಲು ತಡರಾತ್ರಿಯಲ್ಲೂ ಇಲ್ಲಿಗೆ ಜಮಾಯಿಸುತ್ತಾರೆ. ಈ ಕರಗಕ್ಕೆ ನೂರಾರು ವರ್ಷಗಳ ಐತಿಹ್ಯವಿದೆ. ಈ ಬಾರಿ ಏಪ್ರಿಲ್ 4ರಿಂದ ಕರಗದ ಆಚರಣೆಗಳು ಶುರುವಾಗಲಿವೆ. ಮೊದಲಿಗೆ ರಥೋತ್ಸವ ಧ್ವಜಾರೋಹಣ ನೆರವೇರಲಿದ್ದು, ಬಳಿಕ ಪ್ರತಿದಿನವೂ ವಿಶೇಷ ಪೂಜೆ, ಆರತಿ ದೀಪಗಳು, ಹಸಿ ಕರಗ, ಪೊಂಗಲ್ ಸೇವೆ, ಕರಗ ಶಕ್ತ್ಯುತ್ಸವ- ಧರ್ಮರಾಯಸ್ವಾಮಿ ಮಹಾರಥೋತ್ಸವ, ಗಾವು ಶಾಂತಿ, ವಸಂತೋತ್ಸವ, ಧ್ವಜಾರೋಹಣದ ಮೂಲಕ ಕರಗ ಮಹೋತ್ಸವವು ಪೂರ್ಣಗೊಳ್ಳಲಿದೆ. ಕರಗ ಮಹೋತ್ಸವದ ವೇಳಾಪಟ್ಟಿ * ಏಪ್ರಿಲ್ 4: ರಥೋತ್ಸವ, ಧ್ವಜಾರೋಹಣ

* ಏಪ್ರಿಲ್ 5-8: ತನಕ ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ * ಏಪ್ರಿಲ್ 9: ದೀಪಾರತಿಗಳು * ಏಪ್ರಿಲ್ 10: ಹಸಿ ಕರಗ * ಏಪ್ರಿಲ್ 11: ಹೊಂಗಲು ಸೇವೆ * ಏಪ್ರಿಲ್ 12: ಕರಗ ಶಕ್ತ್ಯೋತ್ಸವ, ಧರ್ಮರಾಯಸ್ವಾಮಿ ರಥೋತ್ಸವ * ಏಪ್ರಿಲ್ 13: ಪುರಾಣ ಪ್ರವಚನ ಮತ್ತು ಗಾವು ಶಾಂತಿ * ಏಪ್ರಿಲ್ 14: ವಸಂತೋತ್ಸವ ಧ್ವಜಾರೋಹಣ

Leave a Reply

Your email address will not be published. Required fields are marked *