ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಬಿಜೆಪಿಯ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹಾಗೂ ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರ ವಿವಾಹ ಸಮಾರಂಭ ಇತ್ತೀಚೆಗೆ ನೆರವೇರಿದೆ. ಭಾನುವಾರವಷ್ಟೇ ಇವರ ಅದ್ಧೂರಿ ಆರತಕ್ಷತೆಯೂ ನಡೆದಿದೆ. ಎಲ್ಲ ಸುಸೂತ್ರವಾಗಿ ನಡೆದಿದೆ ಎಂದುಕೊಳ್ಳುವಷ್ಟರಲ್ಲಿ ತೇಜಸ್ವಿ ಸೂರ್ಯ ಅವರ ಮೇಲೆ ಆರೋಪವೊಂದು ಕೇಳಿಬರುತ್ತಿದೆ. ಮದುವೆ ವಿಚಾರದಿಂದಲೇ ಅವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇಷ್ಟಕ್ಕೂ ತೇಜಸ್ವಿ ಸೂರ್ಯ ಅವರ ಮೇಲೆ ಕೇಳಿಬಂದಿರುವ ಆರೋಪವೇನು ಗೊತ್ತಾ?
ತೇಜಸ್ವಿ ಸೂರ್ಯ ಅವರು ಮದುವೆ ಹೊತ್ತಲ್ಲೇ ಮಾದರಿ ನಡೆ ಪ್ರದರ್ಶಿಸಿದ್ದರು. ಈಗ ಇದೇ ಇವರಿಗೆ ಮುಳುವಾಗಿ ಪರಿಣಮಿಸಿದೆ. ತೇಜಸ್ವಿ ಸೂರ್ಯ ಆಡಿರುವ ಒಂದು ಮಾತು ಇದೀಗ ವಿವಾದ ಸೃಷ್ಟಿಸಿದೆ. ತೇಜಸ್ವಿ ಅವರ ಹೇಳಿಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯವೂ ಕೇಳಿಬಂದಿದೆ. ಸಂಸದ ತೇಜಸ್ವಿ ಅವರು ಹೇಳಿದ್ದೇನು? ಅದಕ್ಕೆ ಯಾರಿಂದ ವಿರೋಧ ಎನ್ನುವ ವಿವರ ಇಲ್ಲಿದೆ..
ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೇಜಸ್ವಿ ಸೂರ್ಯ ಅವರು ಭಾನುವಾರ ನಡೆದ ಅದ್ಧೂರಿ ಆರತಕ್ಷತೆಗೂ ಮುನ್ನ ವಿಶೇಷ ಮನವಿಯೊಂದನ್ನು ಮಾಡಿದ್ದರು. ಆರತಕ್ಷತೆಗೆ ಬರುವವರು ದಯವಿಟ್ಟು ಹೂವಿನ ಬೊಕ್ಕೆಗಳು ಹಾಗೂ ಡ್ರೈಫ್ರೂಟ್ಸ್ಗಳನ್ನು ತರಬೇಡಿ ಎಂದು ಸವಿನಯದಿಂದ ಮನವಿ ಮಾಡಿದ್ದರು. ಇದಕ್ಕೆ ಅವರು ಕಾರಣವನ್ನೂ ನೀಡಿದ್ದರು. ಹೂವಿನ ಬೊಕ್ಕೆಗಳಿಗೆ ಸುಮ್ಮನೆ ದುಂದು ವೆಚ್ಚ ಮಾಡಬೇಡಿ. ಕೇವಲ ಒಂದು ನಿಮಿಷದಲ್ಲಿ ಆ ಹೂವನ್ನು ಸ್ವೀಕರಿಸಿ, ಪಕ್ಕಕ್ಕೆ ಇಡಲಾಗುತ್ತೆ. ಇದೆಲ್ಲ ಸುಮ್ಮನೆ ವೇಸ್ಟ್ ಎನ್ನುವ ಮೂಲಕ ಮಾದರಿ ನಡೆ ತೋರಿದ್ದರು. ಈಗ ಇದೇ ಹೇಳಿಕೆಗೆ ಎಲ್ಲೆಡೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಹೂವುಬೆಳೆಗಾರರು ತೇಜಸ್ವಿ ಸೂರ್ಯ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ತೇಜಸ್ವಿ ಸೂರ್ಯ ಅವರು ಹೂವಿನ ಬೊಕ್ಕೆಗಳನ್ನು ವೇಸ್ಟ್ ಎಂದಿರುವುದು ಸರಿಯಲ್ಲ. ಅವರು ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘ ಒತ್ತಾಯಿಸಿದೆ.
ಸಂಸದರು ತಮ್ಮ ಮದುವೆಯ ಅರತಕ್ಷತೆಗೆ ಸಾರ್ವಜನಿಕರನ್ನು ಆಹ್ವಾನಿಸಿದ ವಿಡಿಯೋದಲ್ಲಿ ಅವರು ಹೂಗುಚ್ಛಗಳು ವೇಸ್ಟ್, ಅದನ್ನು ನೀಡಬೇಡಿ ಎಂದು ನಿರಾಕರಿಸಿದ್ದರು. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೂವುಗಳಿಗೆ ವಿಶೇಷ ಸ್ಥಾನವಿದೆ. ದೇವರ ಪೂಜೆ ಸೇರಿದಂತೆ ಶುಭ ಸಂದರ್ಭಗಳಲ್ಲಿ ಹೂವುಗಳನ್ನು ಬಳಸುತ್ತೇವೆ. ಕಾರ್ಯಕ್ರಮಗಳಿಗೆ ಸಹಜವಾಗಿ ಹೂವುಗಳನ್ನು ಕೊಡುಗೆ ರೂಪದಲ್ಲಿ ನೀಡುತ್ತಾರೆ. ನೀವು ಉಡುಗೊರೆಗಳನ್ನು ನಿರಾಕರಿಸಿದ್ದು ಸರಿಯಾಗಿದೆ. ಆದ್ರೆ ಹೂವಿನ ಬೊಕ್ಕೆಗಳನ್ನು ವೇಸ್ಟ್ ಎಂದಿರುವುದು ಸರಿಯಲ್ಲ. ಇದು ಹೂವು ಬೆಳೆಗಾರರಿಗೆ ಮಾಡಿರುವ ಅವಮಾನ ಮಾತ್ರವಲ್ಲದೆ, ಲಕ್ಷಾಂತರ ರೈತರ ಶ್ರಮದ ಫಲಕ್ಕೆ ಧಕ್ಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ತೇಜಸ್ವಿ ಸೂರ್ಯ ಹೇಳಿದ್ದೇನು?: ಭಾರತದಲ್ಲಿ ಪ್ರತಿವರ್ಷ ನಡೆಯುವ ಒಂದು ಕೋಟಿಗೂ ಅಧಿಕ ಮದುವೆ ಸಮಾರಂಭಗಳಲ್ಲಿ ಶೇ 85 ರಷ್ಟು ಹೂವುಗಳು ಹಾಗೂ ಬೊಕ್ಕೆಗಳು ಕೇವಲ 24 ಘಂಟೆಗಳಲ್ಲಿ ನಿಷ್ಕ್ರಿಯವಾಗುತ್ತವೆ. ವರ್ಷಕ್ಕೆ ಏನಿಲ್ಲವೆಂದರೂ 300,000 ಕೆ.ಜಿ.ಯಷ್ಟು ಡ್ರೈಫ್ರೂಟ್ಸ್ ಮದುವೆ ನಡೆಯುವ ಸ್ಥಳದಲ್ಲೇ ಉಳಿದು ಹೋಗುತ್ತವೆ. ಇದರಿಂದ ವಾರ್ಷಿಕ 315 ಕೋಟಿ ಹಣ ಅನಾವಶ್ಯಕವಾಗಿ ವೆಚ್ಚವಾಗುತ್ತದೆ. ಹಾಗಾಗಿ ನಮ್ಮ ಆರತಕ್ಷತೆಗೆ ಹೂವಿನ ಬೊಕ್ಕೆಗಳು, ಡ್ರೈಫ್ರೂಟ್ಸ್ಗಳನ್ನ ದಯವಿಟ್ಟು ತರಬೇಡಿ ಎಂದು ವಿನಂತಿಸಿಕೊಂಡಿದ್ದರು. ಈ ಮೂಲಕ ತೇಜಸ್ವಿ ಅವರು ಮಾದರಿಯಾಗಲು ಹೊರಟಿದ್ದರು. ಈಗ ಇದೇ ಹೇಳಿಕೆ ಅವರಿಗೆ ಮುಳುವಾಗಿದೆ.