ಬೆಂಗಳೂರು || ಮುಡಾ ಹಗರಣ: ನಟೇಶ್ ಮನೆ ಮೇಲೆ ದಾಳಿ ಕಾನೂನುಬಾಹಿರ; ಹೈಕೋರ್ಟ್ ತೀರ್ಪು ಪ್ರಶ್ನಿಸಿ ED ಮೇಲ್ಮನವಿ

ಬೆಂಗಳೂರು || ಮುಡಾ ಹಗರಣ: ನಟೇಶ್ ಮನೆ ಮೇಲೆ ದಾಳಿ ಕಾನೂನುಬಾಹಿರ; ಹೈಕೋರ್ಟ್ ತೀರ್ಪು ಪ್ರಶ್ನಿಸಿ ED ಮೇಲ್ಮನವಿ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ ಅವರ ನಿವಾಸದ ಮೇಲೆ ದಾಳಿ ಮತ್ತು ದಾಖಲೆ ವಶಪಡಿಸಿಕೊಳ್ಳುವ ಕಾರ್ಯಾಚರಣೆ ಕಾನೂನುಬಾಹಿರ, ಅನಗತ್ಯ ಮತ್ತು ಕಾನೂನು ದುರುಪಯೋಗ ಎಂದು ಹೈಕೋರ್ಟ್ ಏಕ ಸದಸ್ಯ ಪೀಠ ತೀರ್ಪು ನೀಡಿದ್ದು, ಈ ತೀರ್ಪು ಪ್ರಶ್ನಿಸಿ ಜಾರಿ ನಿರ್ದೇಶನಾಲಯ(ಇಡಿ) ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.

ಇಡಿ ಅಧಿಕಾರಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್ಎ) ಸೆಕ್ಷನ್ 62 ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ನಟೇಶ ಅವರಿಗೆ ಏಕ ಸದಸ್ಯ ಪೀಠ ನೀಡಿದ ಸ್ವಾತಂತ್ರ್ಯವನ್ನೂ ಇಡಿ ಪ್ರಶ್ನಿಸಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ವಿಭಾಗೀಯ ಪೀಠ ಇಡಿ ಮೇಲ್ಮನವಿಯನ್ನು ಸ್ವೀಕರಿಸಿದೆ. ಈ ಮಧ್ಯೆ, ನಟೇಶ್ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ದುಷ್ಯಂತ್ ದೇವ್ ಅವರು, ಮೇಲ್ಮನವಿ ವಿಚಾರಣೆಯ ಸಂದರ್ಭದಲ್ಲಿ ಇಡಿ ಅಧಿಕಾರಿಗಳ ವಿರುದ್ಧ ಏಕ ಸದಸ್ಯ ಪೀಠ ನೀಡಿದ ಸ್ವಾತಂತ್ರ್ಯದ ಮೇಲೆ ಕಾರ್ಯನಿರ್ವಹಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಏತನ್ಮಧ್ಯೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಮತ್ತು ಕೆ. ಅರವಿಂದ್ ಕಾಮತ್ ಅವರು ಏಕ ಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಏಕ ಸದಸ್ಯ ಪೀಠ ನೀಡಿದ ಆಕ್ಷೇಪಾರ್ಹ ಆದೇಶದ ಆಧಾರದ ಮೇಲೆ EDಯ ಎಲ್ಲಾ ತನಿಖೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಅವರು ವಾದಿಸಿದರು. ಆದರೆ ನಟೇಶ್ ಪರ ವಕೀಲ ದೇವ್ ಅವರು, ಅರ್ಜಿಯಲ್ಲಿ ಮಧ್ಯಂತರ ತಡೆ ಕೋರಿಲ್ಲ ಎಂದು ತಡೆಯಾಜ್ಞೆಯನ್ನು ವಿರೋಧಿಸಿದರು.

ನ್ಯಾಯಾಲಯವು ಮಧ್ಯಂತರ ತಡೆ ಕೋರಿ ಅರ್ಜಿ ಸಲ್ಲಿಸಲು ಇಡಿಗೆ ಸಮಯ ನೀಡಿ, ವಿಚಾರಣೆಯನ್ನು ಏಪ್ರಿಲ್ 8 ಕ್ಕೆ ಮುಂದೂಡಿದೆ.

Leave a Reply

Your email address will not be published. Required fields are marked *