ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿದ್ದು, ರೋಗಿಗಳು ಹೊರಗಿನಿಂದ ಔಷಧಿ ಖರಿಸುವ ಪರಿಸ್ಥಿತಿ ಇರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಹೇಳಿದರು.
ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸ್ಥಳೀಯ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ವಿತರಣೆ ಕುರಿತು ಈಗಾಗಲೇ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಟೆಂಡರ್ ಪ್ರಕ್ರಿಯೆಯಿಂದಾಗಿ ಸರಬರಾಜು ಆಗದ ಔಷಧಗಳನ್ನು ಸ್ಥಳೀಯವಾಗಿಯೇ ಖರೀದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರಾಜ್ಯ ಮಾತ್ರವಲ್ಲದೇ ದೇಶದಲ್ಲಿ ಕೆಲ ತಯಾರಿಕಾ ಕಂಪನಿಗಳು ಕಳಪೆ ಔಷಧ ಸರಬರಾಜು ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಇಂತಹ ಔಷಧ ಸೇವನೆಯಿಂದ ಜೀವ ಹಾನಿಯಾಗುತ್ತಿದ್ದು, ಇದನ್ನ ತಡೆಯಲು ಸರ್ಕಾರ ಸೂಕ್ತ ಕ್ರಮಗಳನ್ನ ಕೈಗೊಂಡಿದೆ.
ಔಷಧ ತಯಾರಕ ಕಂಪೆನಿಗಳಿಂದ ಕೆಎಸ್ಎಂಎಸ್ಸಿಎಲ್ ಖರೀದಿಸಿದ ಬಳಿಕ ಸರಬರಾಜುವ ಮುನ್ನ ಕಡ್ಡಾಯವಾಗಿ ಗುಣಮಟ್ಟ ದೃಢೀಕರಿಸಲು ನಿರ್ಧರಿಸಲಾಗಿದೆ. ಹೀಗಾಗಿ, 12 ಲ್ಯಾಬ್ಗಳನ್ನ ತೆರೆಯಲಾಗಿದೆ. ಔಷಧದ ಮಾದರಿಗಳನ್ನ ಸಂಗ್ರಹಿಸಿ ಗುಟಮಟ್ಟದ ಬಗ್ಗೆ ಖಾತ್ರಿಗೊಳಿಸಿದ ಬಳಿಕವಷ್ಟೇ ಜಿಲ್ಲಾ ಔಷಧ ಉಗ್ರಾಣಗಳಿಗೆ ಸರಬರಾಜು ಮಾಡಲಾಗುತ್ತಿದೆ. ಉತ್ಪಾದಕ ಕಂಪೆನಿಗಳಿಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಖುದ್ದು ಅಧಿಕಾರಿಗಳು ತೆರಳಿ ಗುಣಮಟ್ಟದ ಉತ್ಪಾದನೆ ಬಗ್ಗೆ ಪರಿಶೀಲಿಸುವ ಸಂಬಂಧ ಟೆಂಡರ್ ಷರತ್ತಿನೊಳಗೆ ಬರಬೇಕೆಂಬ ಪ್ರಸ್ತಾವನೆಯನ್ನ ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ.
ಅಗತ್ಯವಿರುವ ಔಷಧಗಳನ್ನ ಸರಬರಾಜು ಮಾಡಲು ಬಿಡ್ದಾರರು ಟೆಂಡರ್ನಲ್ಲಿ ಭಾಗಿಯಾಗುತ್ತಿಲ್ಲ. ಹೀಗಾಗಿ, ಸ್ಥಳೀಯ ಮಟ್ಟದಲ್ಲಿ ಔಷಧ ಖರೀದಿಸಲು ಸಂಬಂಧಿಸಿದ ಪ್ರಾಧಿಕಾರಗಳಿಗೆ ಅನುಮತಿ ನೀಡಲಾಗಿದೆ. 2022-23ರಲ್ಲಿ ಅನುಮೋದಿಸಿದ್ದ 732 ಅಗತ್ಯ ಔಷಧಗಳ ಖರೀದಿಯನ್ನ ಈ ವರ್ಷ 1084 ಹೆಚ್ಚಿಸಲಾಗಿದೆ. ಬೇಡಿಕೆಗನುಗುಣವಾಗಿ ಪೂರೈಕೆ ಕಡಿಮೆಯಿರುವ ಕಾರಣ ಅನಿವಾರ್ಯವಾಗಿ ವೈದ್ಯರು ಹೊರಗೆ ಖರೀದಿಸುವಂತೆ ಶಿಫಾರಸು ಮಾಡುತ್ತಿದ್ದಾರೆ. ಇದನ್ನ ಕಡಿಮೆಗೊಳಿಸಲು 1084ಕ್ಕೆ ಏರಿಸಲಾಗಿದೆ. ಅಗತ್ಯವಾದ ಔಷಧ ವಿತರಣೆ ಹಾಗೂ ಸಕಾಲಕ್ಕೆ ವೈದ್ಯರ ಚಿಕಿತ್ಸೆ ನೀಡುವುದು ಸರ್ಕಾರಿ ಆಸ್ಪತ್ರೆಗಳ ಮೂಲ ಉದ್ದೇಶವಾಗಿದೆ. ಆದ್ಯತೆ ಮೇರೆಗೆ ಕೆಎಸ್ಎಂಎಸ್ಸಿಎಲ್ ಸುಧಾರಣೆ ತರಲಾಗುತ್ತಿದೆ. ಅಲ್ಲದೇ ಟೆಂಡರ್ ಪ್ರಕ್ರಿಯೆಯನ್ನ ಸರಳೀಕರಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಜನವರಿಯಿಂದ ರಾಜ್ಯದಲ್ಲಿ ಉಂಟಾದ ಬಾಣಂತಿಯರ ಸಾವುಗಳಿಗೆ ನಿಖರ ಕಾರಣದ ಬಗ್ಗೆ ಪ್ರತಿಯೊಂದು ಸ್ಯಾಂಪಲ್ಸ್ ಗಳನ್ನ ವಿಶ್ಲೇಷಿಸಲಾಗುತ್ತಿದೆ. ದೇಶಕ್ಕೆ ಮಾದರಿ ಪ್ರತ್ಯೇಕ ನೀತಿಯನ್ನ ಜಾರಿಗೆ ಮುಂದಾಗಿದ್ದೇವೆ. ಕೇಂದ್ರವು ಇದಕ್ಕೆ ಸಹಕಾರ ನೀಡಬೇಕಾಗಿದೆ ಎಂದು ಹೇಳಿದರು.