ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಈಗಾಗಲೇ ಜಾಗತಿಕವಾಗಿ ಗುರುತಿಸಿಕೊಂಡಿದೆ. ಅತ್ಯುತ್ತಮ ಏರ್ಪೋರ್ಟ್ಗಳಲ್ಲಿಯೂ ಸ್ಥಾನ ಪಡೆದುಕೊಂಡಿರುವ ಈ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಉತ್ತಮ ಸ್ಪಂದನೆ ಹಾಗೂ ಸೇವೆ ನೀಡುವಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಇಲ್ಲಿ ಪ್ರಯಾಣಿಕರಿಗಾಗಿ ಹೊಸ ವ್ಯವಸ್ಥೆಯೊಂದನ್ನು ಮಾಡಲಾಗಿದೆ. ದೇಶದ ಇನ್ಯಾವುದೇ ಏರ್ಪೋರ್ಟ್ಗಳಲ್ಲಿ ಇಂತಹ ಸೇವೆ ಇಲ್ಲ ಎಂದು ಹೇಳಲಾಗುತ್ತಿದೆ. ಪ್ರಯಾಣಿಕರಿಗೆ ಪರಿಚಯಿಸಿರುವ ಈ ಹೊಸ ಸೇವೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿ ತಿಳಿಯಿರಿ..
ವಿಮಾನ ನಿಲ್ದಾಣದ ಟರ್ಮಿನಲ್ 2ರ 4ನೇ ಹಂತದ ಅಂತರರಾಷ್ಟ್ರೀಯ ಲಾಂಜ್ ಬಳಿ ಪ್ರಯಾಣಿಕರ ಆರೋಗ್ಯ ದೃಷ್ಟಿಯಿಂದ ಇಲ್ಲಿ ಪ್ರತ್ಯೇಕ ಸಂವೇದನಾ ಕೊಠಡಿಯನ್ನು ತೆರೆಯಲಾಗಿದೆ. ಇದನ್ನು ಮುಖ್ಯವಾಗಿ ಆಟಿಸಂ (Autism) ಅಥವಾ ನ್ಯೂರೋಡೈವರ್ಜೆಂಟ್ ಸ್ಪೆಕ್ಟ್ರಂ (neurodivergent spectrum) ಸಮಸ್ಯೆಯಿಂದ ಬಳಲುತ್ತಿರುವ ಪ್ರಯಾಣಿಕರಿಗೆ ಮೀಸಲಿಡಲಾಗಿದೆ. ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ ಎಂದು ಹೇಳಲಾಗುತ್ತದೆ. ನರ ಸಂಬಂಧಿ ಸಮಸ್ಯೆಯುಳ್ಳ ಪ್ರಯಾಣಿಕರು ಮತ್ತು ಸಂವೇದನಾ ಸೂಕ್ಷ್ಮತೆ ಹೊಂದಿರುವ ವ್ಯಕ್ತಿಗಳ ಅನುಕೂಲಕ್ಕಾಗಿ ಈ ಸಂವೇದನಾ ಕೊಠಡಿಯನ್ನು ಪರಿಚಯಿಸಲಾಗಿದೆ.
ಆಟಿಸಂ ಅಥವಾ ಡೈವರ್ಜೆಂಟ್ ಸ್ಪೆಕ್ಟ್ರಮ್ನಲ್ಲಿರುವ ಪ್ರಯಾಣಿಕರಿಗೆ ಪ್ರಯಾಣವು ಕೆಲವೊಮ್ಮೆ ಒತ್ತಡವ ಉಂಟು ಮಾಡುತ್ತದೆ. ಹೀಗಾಗಿ ಪ್ರಯಾಣದ ನಡುವೆ ಏರ್ಪೋರ್ಟ್ನ ಟರ್ಮಿನಲ್ 2ರಲ್ಲಿರುವ ಈ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲು ಅವಕಾಶವೂ ಕಲ್ಪಿಸಿದೆ. ವೈವಿಧ್ಯಮಯ ಸಂವೇದನಾ ಅವಶ್ಯಕತೆಗಳನ್ನು ಹೊಂದಿರುವ ಪ್ರಯಾಣಿಕರಿಗೆ ಸಹಾಯ ಮಾಡಲು ವಿಶೇಷವಾಗಿ ರಚಿಸಲಾದ ಶಾಂತತೆಯ ಗೂಡು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯವಾಗಿ ಇಲ್ಲಿ ಆಟಿಸಂ ಇರುವ ಮಕ್ಕಳಿಗೆ ಬೆಳಕು, ಆಟವಾಡಲು ಆಟಿಕೆಗಳು ಸೇರಿದಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಇವು ಆಟಿಸಂ ಇರುವ ಮಕ್ಕಳಿಗೆ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅವರು ವಿಮಾನ ನಿಲ್ದಾಣಕ್ಕೆ ಬಂದಾಗ ಅವರ ಅನುಭವವನ್ನು ಹೆಚ್ಚು ಶಾಂತವಾಗಿಸಲು ಸಹಾಯ ಮಾಡುತ್ತದೆ. ಈ ಸಂವೇದನಾ ಕೊಠಡಿಯು ವಿಮಾನ ಹಾರಾಟದ ಮೊದಲು ಆಟಿಸಂ ಪ್ರಯಾಣಿಕರಿಗೆ ಆತಂಕವನ್ನು ಕಡಿಮೆ ಮಾಡಲು ಬಹಳ ನೆರವಾಗಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಏರ್ಪೋರ್ಟ್ ಅಧಿಕಾರಿಗಳು, “ಪ್ರಯಾಣ ಎಲ್ಲರಿಗೂ ಇಷ್ಟ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬ ಪ್ರಯಾಣಿಕರಿಗೂ ಒತ್ತಡಮುಕ್ತ ಹಾಗೂ ಎಲ್ಲರನ್ನೂ ಒಳಗೊಂಡ ವಿಮಾನ ನಿಲ್ದಾಣದ ಅನುಭವವನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. ಹೀಗಾಗಿ ಏರ್ಪೋರ್ಟ್ನಲ್ಲಿ ಹೊಸದಾಗಿ ಉದ್ಘಾಟಿಸಿರುವ ಈ ಸಂವೇದನಾ ಕೊಠಡಿಯು ದೇಶದ ಬೇರೆ ಯಾವುದೇ ವಿಮಾನ ನಿಲ್ದಾಣದಲ್ಲಿ ಇಲ್ಲ. ಈ ವಿಚಾರದಲ್ಲೂ ಬೆಂಗಳೂರು ಏರ್ಪೋರ್ಟ್ ದಾಖಲೆ ನಿರ್ಮಿಸಿದೆ ಎಂದು ಹೇಳಿದ್ದಾರೆ. ಈ ಸಂವೇದನಾ ಕೊಠಡಿಯಲ್ಲಿ ಶಾಂತ ರೀತಿಯ ಅನುಭವ ಪಡೆಯಬಹುದು. ಆ ರೀತಿ ಅದನ್ನು ವಿನ್ಯಾಸಗೊಳಿಸಲಾಗಿದೆ. ಆಟಿಸಂ ಪ್ರಯಾಣಿಕರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ಕೊಠಡಿಯಲ್ಲಿ ಸಂವೇದನಾ ಅನುಭವಗಳನ್ನು ಬಯಸುವ ಉತ್ತಮವಾದ ಬೆಳಕಿನ ವ್ಯವಸ್ಥೆ, ಆಟಿಕೆಗಳನ್ನು ಇರಿಸಲಾಗಿದೆ. ವಿಮಾನವನ್ನು ಹತ್ತುವ ಮೊದಲು ಇಲ್ಲಿ ವಿಶ್ರಾಂತಿ ಪಡೆಯಲು ಅವರಿಗೆ ಶಾಂತವಾದ ವಾತಾವರಣ ನಿರ್ಮಿಸಲಾಗಿದೆ. ಈ ಕೊಠಡಿ ಇನ್ನು ಮುಂದೆ ಪ್ರಯಾಣಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ ಎಂದಿದ್ದಾರೆ.