ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ‘ಗ್ರೇಟರ್ ಬೆಂಗಳೂರು’ ಯೋಜನೆ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಯೋಜನಾ ವ್ಯಾಪ್ತಿಯಲ್ಲಿ ಬರುವ ಪಟ್ಟಣ/ ಗ್ರಾಮದ ವಿವರಗಳನ್ನು ಈಗಾಗಲೇ ಅಧಿಸೂಚಿಸಲಾಗಿದೆ. ಆದರೆ ರಾಮನಗರ ಜಿಲ್ಲೆಯಲ್ಲಿ ‘ಗ್ರೇಟರ್ ಬೆಂಗಳೂರು’ ಯೋಜನೆಗೆ ಭೂಮಿ ನೀಡಲು ಆಸ್ತಿ ಮಾಲೀಕರು, ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟೌನ್ಶಿಪ್ ಭೂ ಸ್ವಾಧೀನ ವಿರೋಧಿಸಿ ರಾಮನಗರ ತಾಲೂಕಿನ ಹೊಸೂರು ಗ್ರಾಮದ ಮದ್ದೂರಮ್ಮ ದೇವಾಲಯದ ಆವರಣದಲ್ಲಿ ರೈತರು ಬೃಹತ್ ಸಭೆ ನಡೆಸಿದರು. ಭೂ ಸ್ವಾಧೀನ ವಿರೋಧಿಸಿ ರೈತರು ರಾಮನಗರ ಜಿಲ್ಲಾಧಿಕಾರಿ ಕಛೇರಿ ತನಕ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದಾರೆ.
ಸರ್ಕಾರ ಈಗಾಗಲೇ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961 (1963ರ ಕರ್ನಾಟಕ ಅಧಿನಿಯಮ ಸಂಖ್ಯೆ:11)ರ ಕಲಂ 4-A ಹಾಗೂ 4-B ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗ್ರಾಮಗಳನ್ನು ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ ಮತ್ತು ಕನಕಪುರ ಯೋಜನಾ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಗಳ ವ್ಯಾಪ್ತಿಯಿಂದ ಹಿಂಪಡೆದಿದೆ.
ಸರ್ಕಾರದ ಅಧಿಸೂಚನೆ ದಿನಾಂಕ 18.11.2023ರಲ್ಲಿ ರಚಿಸಲಾದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಪರಿಷ್ಕೃತ ಸ್ಥಳೀಯ ಯೋಜನಾ ಪ್ರದೇಶವನ್ನು ಈ ಮೂಲಕ ಘೋಷಿಸಲಾಗಿದೆ. ಗ್ರೇಟರ್ ಬೆಂಗಳೂರು ಪರಿಷ್ಕೃತ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಪಟ್ಟಣ/ ಗ್ರಾಮದ ವಿವರಗಳನ್ನು ಪ್ರಕಟಿಸಿದೆ.
ರೈತರ ವಿರೋಧ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟೌನ್ಶಿಪ್ಗೆ ಬಿಡದಿ ಹೋಬಳಿ ಸಮೀಪ 9,600 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಆದರೆ ಇಲ್ಲಿ ಕೃಷಿ ಮಾಡುತ್ತಿರುವ ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೊಸೂರು ಅಥವ ಭೈರಮಂಗಲದಿಂದ ಜಿಲ್ಲಾಧಿಕಾರಿ ಕಛೇರಿ ತನಕ ಶೀಘ್ರದಲ್ಲೇ ಪಾದಯಾತ್ರೆ ಮಾಡಲು ತೀರ್ಮಾನಿಸಿದ್ದಾರೆ. ಪಕ್ಷಾತೀತವಾಗಿ ಹಾಗೂ ರಾಜಕೀಯ ರಹಿತವಾಗಿ ಈ ಹೋರಾಟ ನಡೆಸಲು ರೈತರು ಮುಂದಾಗಿದ್ದಾರೆ. ಯೋಜನೆ ವ್ಯಾಪ್ತಿಗೆ ಸೇರುವ ಪ್ರತಿ ಗ್ರಾಮಗಳ ತಲಾ ಮೂವರು ಸದಸ್ಯರು ಸೇರಿರುವ ಹೋರಾಟ ಸಮಿತಿ ರಚನೆ ಮಾಡಲು ಸಹ ರೈತರು ನಿರ್ಧರಿಸಿದ್ದಾರೆ. ಆದ್ದರಿಂದ ಯೋಜನೆ ವಿರೋಧಿಸಿ ಹೋರಾಟ ಪ್ರಬಲವಾಗುವ ಸೂಚನೆ ಸಿಕ್ಕಿದೆ. ಸದ್ಯದ ಮಾಹಿತಿ ಪ್ರಕಾರ ಭೈರಮಂಗಲ, ಬನ್ನಿಗಿರಿ, ಮಂಡಲಹಳ್ಳಿ, ಕಂಚುಗಾರನಹಳ್ಳಿ, ಕಂಚುಗಾರನಹಳ್ಳಿ ಕಾವಲು, ಕೆಂಪಯ್ಯನಪಾಳ್ಯ, ಹೊಸೂರು, ಅರಾಳುಸಂದ್ರ, ಕೆ. ಜೆ. ಗೊಲ್ಲರಪಾಳ್ಯ ಗ್ರಾಮಗಳ ರೈತರು, ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಟೌನ್ಶಿಪ್ ನಿರ್ಮಾಣಕ್ಕೆ ಗ್ರಾಮಗಳ ಜನರ ಒಪ್ಪಿಗೆ ಪಡೆಯದೇ ಗ್ರಾಮಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿದೆ. ಸರ್ಕಾರ ಯಾರಿಗೆ ಅನುಕೂಲ ಮಾಡಿಕೊಡಲು ತನ್ನಿಷ್ಟದಂತೆ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಭೂ ಸ್ವಾಧೀನ ಮಾಡಿಕೊಳ್ಳುತ್ತಿದೆ? ಎಂದು ರೈತರು ಪ್ರಶ್ನೆ ಮಾಡಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡುವ ತನಕ ಗ್ರಾಮಗಳ ಜನರು ಹೋರಾಟ ನಡೆಸಬೇಕು ಎಂದು ವಿವಿಧ ಮುಖಂಡರು ಸಭೆಯಲ್ಲಿ ತೀರ್ಮಾನ ಕೈಗೊಂಡರು. ಸರ್ಕಾರ, ರಾಮನಗರ ಜಿಲ್ಲಾಡಳಿತ ಪರವಾಗಿ ರೈತರ ವಿರೋಧದ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ.