ಹಾಸನ: ಒಂಟಿ ಸಲಗವೊಂದು ಇಟಿಎಫ್ ಸಿಬ್ಬಂದಿಯನ್ನು ಅಟ್ಟಾಡಿಸಿದ ಘಟನೆ ಬೇಲೂರಿನ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜುಲ್ಫಿ ಎಂಬವರ ಕಾಫಿ ತೋಟದಲ್ಲಿ ಇಟಿಎಫ್ ಸಿಬ್ಬಂದಿ ಪ್ರಶಾಂತ್ ಹಾಗೂ ಸುನೀಲ್ ಕಾಡಾನೆ ಚಲನವಲನಗಳನ್ನು ಗಮನಿಸುತ್ತಿದ್ದರು. ಈ ವೇಳೆ, ವಿಕ್ರಾಂತ್ ಹೆಸರಿನ ಒಂಟಿಸಲಗ ಏಕಾಏಕಿ ದಾಳಿ ನಡೆಸಿದೆ. ಜೀವ ಉಳಿಸಿಕೊಳ್ಳಲು ವೇಗವಾಗಿ ಸಿಬ್ಬಂದಿ ಓಡಿ ಬಂದಿದ್ದಾರೆ.
ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ವಿಕ್ರಾಂತ್ ಅಟ್ಟಿಸಿಕೊಂಡು ಬಂದಿರುವ ವೀಡಿಯೊ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ (ಮಾ.17) ಬೇಲೂರು ತಾಲೂಕಿನ ಹಳ್ಳಿಗದ್ದೆ ಗ್ರಾಮದ ಶಾಂತಿ ಎಸ್ಟೇಟ್‌ನಲ್ಲಿದ್ದ ಕಾಡಾನೆಯೊಂದನ್ನು ಇಟಿಎಫ್ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಕ್ರೇನ್ ಮೂಲಕ ಕಾಡಾನೆಯನ್ನು ಲಾರಿಗೆ ಶಿಫ್ಟ್ ಮಾಡಲಾಗಿದ್ದು, ಅರಣ್ಯಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
