ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಬಹು ನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗದಲ್ಲಿ ಸಂಚಾರ ಯಾವಾಗ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. 2025ರ ಆರಂಭದಲ್ಲಿ ಮೆಟ್ರೋ ‘ಹಳದಿ’ ಮಾರ್ಗದಲ್ಲಿ ಸಂಚಾರ ನಿರೀಕ್ಷೆ ಮಾಡಲಾಗಿತ್ತು. ಆದರೆ ಮಾರ್ಚ್ ಅಂತ್ಯವಾದರೂ ಇನ್ನು ರೈಲು ಸಂಚಾರ ಯಾವಾಗ ಎಂಬ ಸೂಚನೆ ಸಿಕ್ಕಿಲ್ಲ. ಸದ್ಯದ ಮಾಹಿತಿಗಳ ಪ್ರಕಾರ ಮೇ ಅಂತ್ಯಕ್ಕೆ ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ರೈಲುಗಳು ಓಡಲಿವೆ.

ನಗರದ ಬಹು ನಿರೀಕ್ಷಿತ ಮತ್ತು ಸುಮಾರು 3 ಲಕ್ಷ ಜನರಿಗೆ ಉಪಯೋಗವಾಗಲಿದೆ ಅಂದಾಜಿಸಲಾದ ಮಾರ್ಗ ಆರ್. ವಿ. ರಸ್ತೆ-ಬೊಮ್ಮಸಂದ್ರ. 18.8 ಕಿ. ಮೀ. ಉದ್ದದ ಮಾರ್ಗವು 16 ನಿಲ್ದಾಣಗಳನ್ನು ಒಳಗೊಂಡಿದೆ. ಈಗಾಗಲೇ ಮಾರ್ಗದಲ್ಲಿ ರೈಲುಗಳು ಪ್ರಾಯೋಗಿಕ ಸಂಚಾರ ನಡೆಯುತ್ತಿದ್ದು, ಇನ್ನೂ ಎರಡು ತಿಂಗಳಿನಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಜಯನಗರದ ಆರ್. ವಿ. ರೋಡ್ನಿಂದ, ಬೊಮ್ಮಸಂದ್ರ ತನಕ 3 ಇಂಟರ್ ಚೇಂಜ್ (ಸಿಲ್ಕ್ ಬೋರ್ಡ್, ಆರ್. ವಿ. ರೋಡ್, ಜಯದೇವ) ನಿಲ್ದಾಣಗಳೊಂದಿಗೆ ಒಟ್ಟು 16 ನಿಲ್ದಾಣಗಳನ್ನು ಈ ಮಾರ್ಗ ಹೊಂದಿದೆ. ಇದು ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಕಾರಣ ನಗರದ ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.
ನಿಲ್ದಾಣಗಳು, ಮಾರ್ಗದ ವಿಶೇಷತೆಗಳು: ಬಿಎಂಆರ್ಸಿಎಲ್ ಆರ್. ವಿ. ರಸ್ತೆ-ಬೊಮ್ಮಸಂದ್ರ ನಮ್ಮ ಮೆಟ್ರೋ ಮಾರ್ಗಕ್ಕೆ ‘ಹಳದಿ’ ಮಾರ್ಗ ಎಂದು ನಾಮಕರಣ ಮಾಡಿದೆ. ಈ ಮಾರ್ಗದಲ್ಲಿ ಬರುವ ಎಲ್ಲಾ ನಿಲ್ದಾಣಗಳ ಮೇಲ್ಛಾವಣಿ ಹಳದಿ ಬಣ್ಣವನ್ನು ಹೊಂದಿರಲಿದೆ. ಡಬಲ್ ಡೆಕ್ಕರ್ ಫ್ಲೈ ಓವರ್ ಮತ್ತು ಚಾಲಕ ರಹಿತ ಮೆಟ್ರೋ ಸಂಚಾರ ನಡೆಸುವುದು ಈ ಮಾರ್ಗದ ವಿಶೇಷತೆಯಾಗಿದೆ.
ಈ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಕೋನೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಬೇರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲುಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್. ವಿ. ರಸ್ತೆ ನಿಲ್ದಾಣಗಳಿವೆ.
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಓಡಿಸಲು ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಫೆಬ್ರವರಿಯಲ್ಲಿ ತಪಾಸಣೆಯನ್ನು ನಡೆಸಿದೆ. ಹೊಸ ರೋಲಿಂಗ್ ಸ್ಟಾಕ್, ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯದ ಒಪ್ಪಿಗೆ ಬಾಕಿ ಇದೆ. ಸಿಗ್ನಲ್ ವ್ಯಸ್ಥೆಯನ್ನು ಪರಿಶೀಲಿಸಲು ಬಿಎಂಆರ್ಸಿಎಲ್ ಮತ್ತೊಮ್ಮೆ ತಂಡವನ್ನು ಆಹ್ವಾನಿಸಬೇಕಿದೆ.
ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ರೈಲು ಓಡಿಸಲು ಪ್ರಮುಖ ಸಮಸ್ಯೆ ಆಗಿರುವುದು ರೈಲುಗಳ ಕೊರತೆ. ಮೇ ತಿಂಗಳಿನಲ್ಲಿ ಸಂಚಾರ ಆರಂಭವಾದರೂ ಸಹ ಕೆಲವು ರೈಲುಗಳ ಜೊತೆಗೆ ಮೆಟ್ರೋ ಸಂಚಾರ ನಡೆಸಬೇಕು. ಈ ವರ್ಷದ ಅಂತ್ಯದ ವೇಳೆಗೆ ಹಳದಿ ಮಾರ್ಗಕ್ಕೆ ಅಗತ್ಯ ಇರುವಷ್ಟು ರೈಲುಗಳು ಬೆಂಗಳೂರು ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಸದ್ಯ 4 ರೈಲುಗಳು ನಗರದಲ್ಲಿದ್ದು, ಮೇ ಮೊದಲ ವಾರದಲ್ಲಿ ಇನ್ನೂ 2 ಸೆಟ್ ರೈಲುಗಳು ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಸಾಫ್ಟ್ವೇರ್ ಇಂಜಿನಿಯರ್ಗಳು ಈ ಮಾರ್ಗವನ್ನು ಹೆಚ್ಚಾಗಿ ಬಳಕೆ ಮಾಡಲಿದ್ದು, ರೈಲು ಸಂಚಾರ ಆರಂಭವಾದರೆ ನಮ್ಮ ಮೆಟ್ರೋ ಒಟ್ಟು ಪ್ರಯಾಣಿಕರ ಸಂಖ್ಯೆ ಬೆಂಗಳೂರು ನಗರದಲ್ಲಿ ಸುಮಾರು 3 ಲಕ್ಷ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ಫೋಸಿಸ್, ಬಯೋಕಾನ್, ಡೆಲ್ಟಾ ಕಂಪನಿಗಳು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಲು ಅನುದಾನವನ್ನು ನೀಡಿವೆ. ಬಿಎಂಆರ್ಸಿಎಲ್ ಜೊತೆ ಈ ಕುರಿತು ಕಂಪನಿಗಳು 30 ವರ್ಷಕ್ಕೆ ಒಪ್ಪಂದವನ್ನು ಮಾಡಿಕೊಂಡಿವೆ. ಟೆಕ್ಕಿಗಳಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೋ ನಿಲ್ದಾಣದಿಂದ ನೇರವಾಗಿ ಐಟಿ ಕಂಪನಿ ಕ್ಯಾಂಪಸ್ಗೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ.
ಹಳದಿ ಮಾರ್ಗದಲ್ಲಿ ರೈಲುಗಳ ಲಭ್ಯತೆ ನೋಡಿಕೊಂಡು ಬೆಳಗ್ಗೆ 5 ರಿಂದ ರಾತ್ರಿ 11 ಗಂಟೆಯ ತನಕ ರೈಲುಗಳನ್ನು ಓಡಿಸಲು ಬಿಎಂಆರ್ಸಿಎಲ್ ತಯಾರಿ ನಡೆಸಿದೆ. ಈ ಮಾರ್ಗ ಸಿಲ್ಕ್ ಬೋರ್ಡ್ನಲ್ಲಿ ನೇರಳೆ ಮಾರ್ಗ, ಆರ್. ವಿ. ರೋಡ್ನಲ್ಲಿ ಹಸಿರು ಮಾರ್ಗಕ್ಕೆ ಸಹ ಸಂಪರ್ಕವನ್ನು ಕಲ್ಪಿಸುತ್ತದೆ. ಬೆಂಗಳೂರು ನಗರದಲ್ಲಿ ಸದ್ಯ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮಾತ್ರ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿದೆ. ನಗರದಲ್ಲಿ ಸುಮಾರು 75 ಕಿ. ಮೀ. ಮೆಟ್ರೋ ಜಾಲವಿದೆ. ಸುಮಾರು 8 ಲಕ್ಷ ಪ್ರಯಾಣಿಕರು ಪ್ರತಿನಿತ್ಯ ಸಂಚಾರವನ್ನು ನಡೆಸುತ್ತಿದ್ದಾರೆ. ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಮೆಟ್ರೋ ಜಾಲ ಇನ್ನೂ 18 ಕಿ. ಮೀ. ವಿಸ್ತರಣೆಯಾಗಲಿದೆ. ಪ್ರಯಾಣಿಕರ ಸಂಖ್ಯೆ ಸುಮಾರು 3 ಲಕ್ಷ ಏರಿಕೆಯಾಗಲಿದೆ. ಈ ಮಾರ್ಗದ ನಿಲ್ದಾಣದ ಕಾಮಗಾರಿಗಳು ಅಂತಿಮ ಹಂತಕ್ಕೆ ತಲುಪಿದ್ದು, ರೈಲುಗಳ ಸಂಚಾರಕ್ಕೆ ಬಿಎಂಆರ್ಸಿಎಲ್ ಸಹ ತಯಾರಿಯನ್ನು ನಡೆಸಿದೆ. ವಿಧಾನಸಭೆ ಕಲಾಪದಲ್ಲಿಯೂ ಹಳದಿ ಮಾರ್ಗದ ಮೆಟ್ರೋ ಸಂಚಾರದ ಬಗ್ಗೆ ಚರ್ಚೆ ನಡೆದಿತ್ತು. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಈ ಕುರಿತು ಪ್ರಶ್ನಿಸಿದ್ದರು. ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಉತ್ತರ ನೀಡಿ, “ಆರ್. ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ ಮೇ 2025ಕ್ಕೆ ಜನರ ಸಂಚಾರಕ್ಕೆ ಮುಕ್ತವಾಗಲಿದೆ” ಎಂದು ಹೇಳಿದ್ದರು. ಹಳದಿ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಓಡಿಸುವುದು ಬಿಎಂಆರ್ಸಿಎಲ್ ಗುರಿಯಾಗಿದೆ. ದಕ್ಷಿಣ ವಲಯದ ರೈಲ್ವೆ ಸುರಕ್ಷತಾ ಆಯುಕ್ತರ ತಂಡ 2025ರ ಫೆಬ್ರವರಿಯಲ್ಲಿ ಈ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲಿನ ಪ್ರಾಯೋಗಿಕ ಪರೀಕ್ಷೆ ನಡೆಸಿದೆ. ಚಾಲಕ ರಹಿತ ಮೆಟ್ರೋ ಸೇವೆಗೆ ಅನುಮತಿ ಪಡೆಯಲು ಇದು ಮೊದಲ ಹೆಜ್ಜೆ ಎಂದು ಬಿಎಂಆರ್ಸಿಎಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ. ಈ ಮಾರ್ಗದಲ್ಲಿ ರೈಲು ಓಡಿಸಲು ಕೋಲ್ಕತ್ತಾದ ಟಿಆರ್ಎಸ್ಎಸ್ನಿಂದ ರೈಲು ಬೋಗಿಗಳು ನಗರಕ್ಕೆ ಬರಬೇಕಿದೆ. ಸದ್ಯ ಎರಡು ಸೆಟ್ ರೈಲುಗಳು ನಗರಕ್ಕೆ ಬಂದಿದ್ದು, ಅವುಗಳ ಮೂಲಕ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗುತ್ತಿದೆ. ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಸಿಲ್ಕ್ ಬೋರ್ಡ್, ಬಿಟಿಎಂ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಖಾಸಗಿ ವಾಹನಗಳು, ಕ್ಯಾಬ್ಗಳ ಸಂಚಾರ ಕಡಿಮೆಯಾಗಲಿದ್ದು, ಟೆಕ್ಕಿಗಳು ಮೆಟ್ರೋ ರೈಲಿನಲ್ಲಿ ಸಂಚಾರ ನಡೆಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ.