ವಿಶೇಷ ಮಾಹಿತಿ : ಮಹಾವೀರ ಜಯಂತಿ ಜೈನ ಧರ್ಮದ ಭಗವಾನ್ ಮಹಾವೀರರ ಜನ್ಮದಿನದ ಅಂಗವಾಗಿ ಜೈನ ಸಮುದಾಯದವರು ಅತ್ಯಂತ ಭಕ್ತಿ ಭಾವದಿಂದ ಆಚರಿಸುವ ಪ್ರಮುಖ ಹಬ್ಬವಾಗಿದೆ. ಭಗವಾನ್ ಮಹಾವೀರರು ಜೈನ ಧರ್ಮದ 24ನೇ ಹಾಗೂ ಅಂತಿಮ ತೀರ್ಥಂಕರರಾಗಿದ್ದು, ಅವರು ಎಲ್ಲಾ ಜೀವಿಗಳ ಪ್ರತಿಯೂ ದಯೆ, ಅಹಿಂಸಾ ಮತ್ತು ಸತ್ಕರ್ಮದ ಸಂದೇಶವನ್ನು ನೀಡಿದ್ದರು.

ಯಾವ ದಿನ ಮಹಾವೀರ ಜಯಂತಿ..?
ಈ ವರ್ಷ ಮಹಾವೀರ ಜಯಂತಿ 2025ರ ಏಪ್ರಿಲ್ 10, ಗುರುವಾರದಂದು ಆಚರಿಸಲಾಗುತ್ತಿದೆ. ಚೈತ್ರ ಶುಕ್ಲ ತ್ರಯೋದಶಿ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಮಹಾವೀರ ಸ್ವಾಮಿಗಳ ಪಂಚಶೀಲ ತತ್ವಗಳು ಏನು..?
ಭಗವಾನ್ ಮಹಾವೀರರು ಉಪದೇಶಿಸಿದ ಪಂಚಶೀಲ ತತ್ವಗಳು ಜೈನ ಧರ್ಮದ ನೈತಿಕ ಹಾಗೂ ಆಚಾರಶಾಸ್ತ್ರದ ಮೂಲ ಆಧಾರಗಳಾಗಿವೆ. ಈ ತತ್ವಗಳು ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎಂಬ ಪಂಕ್ತಿಗಳನ್ನು ಒಳಗೊಂಡಿವೆ.
ಅಹಿಂಸಾ : ಎಲ್ಲ ಜೀವಿಗಳ ಮೇಲೂ ದಯೆಯುಳ್ಳ ನಡೆ. ಯಾವುದೇ ಸ್ಥಿತಿಯಲ್ಲಿ ಹಿಂಸೆಗೆ ತೊಡಗಬಾರದು. ಇತರರಿಗೆ ನೋವುಂಟು ಮಾಡುವ ಕೆಲಸ ತಪ್ಪು.
ಸತ್ಯ : ಸತ್ಯವನ್ನು ಅನುಸರಿಸುವವನು ಜ್ಞಾನಿಯಾಗಿರುತ್ತಾನೆ. ಮಹಾವೀರರು ಸದಾ ಸತ್ಯವಾದ ಮಾತುಗಳನ್ನಾಡುವಂತೆ ಪ್ರೇರೇಪಿಸುತ್ತಿದ್ದರು.
ಅಸ್ತೇಯ : ಇತರರ ಅನುಮತಿಯಿಲ್ಲದೆ ಯಾವುದೇ ವಸ್ತುವನ್ನು ತೆಗೆದುಕೊಳ್ಳಬಾರದು. ಅಸ್ತೇಯವನ್ನು ಪಾಲಿಸುವವರು ಶಿಸ್ತಿನಿಂದ ಜೀವನ ನಡೆಸುತ್ತಾರೆ.
ಬ್ರಹ್ಮಚರ್ಯ : ಶುದ್ಧತೆ ಮತ್ತು ಸಂಯಮದ ಜೀವನದ ಮೂಲಕ ಇಂದ್ರಿಯಗಳ ನಿಯಂತ್ರಣ. ಕಾಮೋತ್ಪತ್ತಿ ಅಥವಾ ಕಾಮಕ್ರೀಯೆಗಳಿಂದ ದೂರವಿರುವುದು.
ಅಪರಿಗ್ರಹ : ಭೌತಿಕ ವಸ್ತುಗಳು ಮತ್ತು ಲಾಲಸೆಯಿಂದ ದೂರವಿರುವುದು. ಇದು ಆತ್ಮಿಕ ಶುದ್ಧತೆಗೆ ದಾರಿ ಮಾಡುತ್ತದೆ.
ಮಹಾವೀರ ಜಯಂತಿ ಹೇಗೆ ಆಚರಿಸಲಾಗುತ್ತದೆ..?
ಮಹಾವೀರ ಜಯಂತಿಯಂದು ಜೈನ ಧರ್ಮಸ್ಥರು ಪ್ರಭಾತಫೇರಿ (ಬೆಳಗಿನ ಮೆರವಣಿಗೆ) ನಡೆಸುತ್ತಾರೆ. ನಂತರ ಭಗವಾನ್ ಮಹಾವೀರರ ಪಾಲ್ಕಿ ಮೆರವಣಿಗೆ ಜರಗುತ್ತದೆ. ಸ್ವರ್ಣ ಮತ್ತು ಬೆಳ್ಳಿ ಕಳಶಗಳಿಂದ ಅಭಿಷೇಕ ಮಾಡಿ, ದೇವಾಲಯದ ಶಿಖರಗಳಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಇಡೀ ದಿನ ಜೈನ ಸಮುದಾಯದಿಂದ ಧಾರ್ಮಿಕ ಕಾರ್ಯಕ್ರಮಗಳು, ಉಪದೇಶಗಳು, ಸೇವಾ ಕಾರ್ಯಗಳು ಮತ್ತು ಭಗವಾನ್ ಮಹಾವೀರರ ಜೀವನದ ಸ್ಮರಣಾ ಕಾರ್ಯಕ್ರಮಗಳು ನೆರವೇರಿಸುತ್ತಾರೆ.