ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಆಸ್ತಿ ಖರೀದಿಸಬೇಕು ಎನ್ನುವುದು ಹಲವರ ಕನಸು. ಈಗಾಗಲೇ ಗಗನಕ್ಕೇರಿರುವ ಭೂಮಿಯ ದರಗಳಿಂದ ಬೆಚ್ಚಿಬಿದ್ದಿರುವ ಜನರು ಭವಿಷ್ಯದ ದೃಷ್ಟಿಯಿಂದ ಈಗಲೇ ಆಸ್ತಿ ಖರೀದಿಸೋಣ ಎಂದು ಪ್ರತಿದಿನವೂ ಒಳ್ಳೆಯ ಪ್ರದೇಶಗಳಲ್ಲಿ ಜಾಗ ಹುಡುಕುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭೂಮಿ ಬೆಲೆ ಏರಿಕೆ ಕಾಣುತ್ತಲೇ ಇರುವ ಕಾರಣ ಎಲ್ಲ ಚಿತ್ತ ಆಸ್ತಿ ಖರೀದಿಯತ್ತ ಇದೆ. ಬೆಂಗಳೂರಿನ ಕೇಂದ್ರಭಾಗದಲ್ಲಿ ಈಗಾಗಲೇ ದುಬಾರಿಯಾಗಿರುವ ಭೂಮಿ ಬೆಲೆ ಕಂಡು ತುಸು ನಗರದಿಂದ ದೂರದಲ್ಲಿ ಆಸ್ತಿಗಳನ್ನು ಖರೀದಿಸುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಪ್ರಾಪರ್ಟಿ ಖರೀದಿ ಹಾಗೂ ಮಾರಾಟಕ್ಕೆ ಬೆಸ್ಟ್ ಜಾಗಗಳು ಯಾವುವು?

ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮವು ಇದೀಗ ನಗರವನ್ನೂ ಮೀರಿ ಬೆಳವಣಿಗೆ ಸಾಧಿಸಿದೆ. ಬೆಂಗಳೂರು ಪೂರ್ವಭಾಗದಲ್ಲಿ ಹೊಸ ಆಸ್ತಿಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಕ್ರಮೇಣ ಆಸ್ತಿ ಬೆಲೆಗಳು ಕೂಡ ಗರಿಷ್ಠ ಮಟ್ಟವನ್ನು ತಲುಪಿವೆ. ಇದು ಮಾಲೀಕರು ಮಾರಾಟ ಮಾಡಲು ಮತ್ತು ತಮ್ಮ ಆದಾಯವನ್ನು ಹೆಚ್ಚಿಸಲು ಸೂಕ್ತ ಸಮಯ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಪೈಪೋಟಿ ನೀಡುವಂತೆ ಬೆಂಗಳೂರು ಉತ್ತರ ಭಾಗ ಕೂಡ ಪ್ರಮುಖ ಬೆಳವಣಿಗೆಯ ಕಾರಿಡಾರ್ ಆಗಿ ಹೊರಹೊಮ್ಮುತ್ತಿದೆ. ಇಲ್ಲಿ ನಿರಂತರ ಅಭಿವೃದ್ಧಿ ಜೊತೆಗೆ ಭವಿಷ್ಯದ ದೃಷ್ಟಿಯಿಂದ ಆಸ್ತಿಗಳ ಖರೀದಿ ಮಾರಾಟದಲ್ಲಿ ಚುರುಕುಗೊಂಡಿದೆ.
ಮುಂದಿನ 5-10 ವರ್ಷಗಳಲ್ಲಿ ಲಾಭ ಬಯಸುವವರಿಗೆ ಉತ್ತರ ಬೆಂಗಳೂರು ಅತ್ಯುತ್ತಮ ಹೂಡಿಕೆ ಜಾಗ ಎಂದು ಹೇಳಲಾಗುತ್ತಿದೆ. ಇತ್ತ ಪೂರ್ವ ಬೆಂಗಳೂರು ಕೂಡ ಹೆಚ್ಚಿನ ಆಸ್ತಿ ಮೌಲ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಕೂಡ ಇರುವ ಆಸ್ತಿ ಮಾರಿಕೊಂಡು ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಆ ಹಣದಿಂದ ಬೇರೆ ಕಡೆ ಹೂಡಿಕೆ ಮಾಡುವುದು ಕೂಡ ಹೆಚ್ಚಾಗಿದೆ.
ಪೂರ್ವ ಬೆಂಗಳೂರು ಭಾಗದಲ್ಲ ಪ್ರಮುಖ ಐಟಿ ಕಂಪನಿಗಳು, ಅಭಿವೃದ್ಧಿ ಹೊಂದಿದ ಮೂಲಸೌಕರ್ಯ, ಪ್ರೀಮಿಯಂ ವಸತಿ ಸೌಲಭ್ಯಗಳು ಇರುವುದರಿಂದ ಬಹಳ ಹಿಂದಿನಿಂದಲೂ ಮನೆ ಖರೀದಿದಾರರು ಮತ್ತು ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಇಲ್ಲಿನ ಆಸ್ತಿ ಬೆಲೆಗಳು ಈಗ ಗರಿಷ್ಠ ಮಟ್ಟಕ್ಕೆ ತಲುಪಿರುವುದರಿಂದ 2025ರಲ್ಲಿ ಭೂಮಿ ಮಾರಾಟ ಹಾಗೂ ರಿಯಲ್ ಎಸ್ಟೇಟ್ನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ವೈಟ್ಫೀಲ್ಡ್, ಮಾರತ್ತಹಳ್ಳಿ, ಕೆಆರ್ ಪುರ, ಸರ್ಜಾಪುರ ರಸ್ತೆಯಂತಹ ಪ್ರದೇಶಗಳಲ್ಲಿ ಡೆವಲಪರ್ಗಳು ಹೊಸ ಯೋಜನೆಗಳೊಂದಿಗೆ ಪೂರ್ವ ಬೆಂಗಳೂರು ಮಾರುಕಟ್ಟೆಯನ್ನು ಗಗನಕ್ಕೇರಿಸಿದ್ದಾರೆ.
ಈ ಭಾಗದಲ್ಲಿ ಮನೆ ಬಾಡಿಗೆ ಮತ್ತು ಹೂಡಿಕೆದಾರರ ಆಸಕ್ತಿ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನ ಪೂರ್ವ ಪ್ರದೇಶಗಳಲ್ಲಿ ಬಾಡಿಗೆ ಬೆಲೆಗಳು 20ರಿಂದ 25ರವರೆಗೆ ಏರಿಕೆಯಾಗಿವೆ ಎಂದು ವರದಿಯಾಗಿದೆ. ಪ್ರಮುಖವಾಗಿ ವೈಟ್ಫೀಲ್ಡ್, ಸರ್ಜಾಪುರ ರಸ್ತೆ, ಬೆಳ್ಳಂದೂರು ಪ್ರದೇಶಗಳು ಬಾಡಿಗೆ ಗೆ ಬಹುಬೇಡಿಕೆ ಪ್ರದೇಶಗಳಾಗಿ ಹೊರಹೊಮ್ಮಿವೆ.
ಪೂರ್ವ ಬೆಂಗಳೂರು ಮಾತ್ರವಲ್ಲದೆ ಉತ್ತರ ಬೆಂಗಳೂರು ಕೂಡ ಇನ್ನೂ ಹೆಚ್ಚಿನ ಬೆಳವಣಿಗೆಯಲ್ಲಿ ಸಾಗಿದೆ. ಇದು ದೀರ್ಘಾವಧಿಯ ಲಾಭವನ್ನು ನಿರೀಕ್ಷಿಸುವ ಹೂಡಿಕೆದಾರರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಮೂಲಸೌಕರ್ಯ ಯೋಜನೆಗಳು, ಉದ್ಯೋಗ ಕೇಂದ್ರಗಳು ಮತ್ತು ಹೆಚ್ಚುತ್ತಿರುವ ಬೇಡಿಕೆಯು ಮುಂದಿನ 5ರಿಂದ 10 ವರ್ಷಗಳಲ್ಲಿ ಇಲ್ಲಿನ ಆಸ್ತಿ ಮೌಲ್ಯಗಳು ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಈ ಭಾಗದಲ್ಲೂ ಭೂಮಿ ಖರೀದಿ ಹಾಗೂ ಮಾರಾಟಕ್ಕೆ ಜನ ಮುಗಿಬಿದ್ದಿದ್ದಾರೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿ, ಯಲಹಂಕ, ಥಣಿಸಂದ್ರ ಪ್ರದೇಶಗಳು ಅಪಾರ ಹೂಡಿಕೆಗೆ, ಆಸ್ತಿ ಖರೀದಿಗೆ ಬೆಸ್ಟ್ ಜಾಗ ಎನ್ನಲಾಗುತ್ತಿದೆ.