ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ: ಮಲ್ಲಿಕಾರ್ಜುನ ಖರ್ಗೆ

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಕೇಂದ್ರ ಸರ್ಕಾರ ಕೂಡ ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯಬೇಕು” ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದರು. ಜಮ್ಮು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ನಿನ್ನೆ ಬಹಳ ದುರಾದೃಷ್ಟಕರ ಘಟನೆ ನಡೆದಿದ್ದು, ಮಧ್ಯಾಹ್ನ 2.30ಕ್ಕೆ ಭೋತ್ಪಾದಕರು ಪ್ರವಾಸಿಗರನ್ನು ನಿರ್ದಯವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ನಮಗೆ ಆಘಾತಕಾರಿಯಾಗಿದ್ದು, ಮನಸ್ಸಿಗೆ ಬಹಳ ನೋವಾಗಿದೆ ಎಂದರು.

ಕಾಶ್ಮೀರದಲ್ಲಿನ ಭಯೋತ್ಪಾದನೆ ದಾಳಿ ಕುರಿತು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಲ್ಲಿಕಾರ್ಜುನ ಖರ್ಗೆ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ಹೇಡಿತನದ ಕೃತ್ಯವನ್ನು ಕಟುವಾಗಿ ಖಂಡಿಸುತ್ತದೆ. ಈ ದಾಳಿಯು ದೇಶದ ಏಕತೆ ಹಾಗೂ ಸಮಗ್ರತೆ ಮೇಲಿನ ನೇರ ದಾಳಿಯಾಗಿದೆ. ಇದು ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ದಾಳಿಯಾಗಿದೆ. ಅಮಾಯಕ ನಾಗರೀಕರ ಮೇಲೆ ದಾಳಿ ಮಾಡುವವರು ಮನುಷ್ಯರಲ್ಲ. ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಅವರ ಜತೆ ಮಾತನಾಡಿದ್ದು, ಜಮ್ಮು ಕಾಶ್ಮೀರದ ಉಮರ್ ಅಬ್ದುಲ್ಲಾ ಹಾಗೂ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿ ಅನೇಕ ಮಾಹಿತಿ ಕಲೆಹಾಕಿದ್ದೇನೆ. ಈ ಕೃತ್ಯದ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ ಎಂದರು.

ಈ ವಿಚಾರವಾಗಿ ನಾಳೆ ಬೆಳಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕರೆಯಲಾಗಿದೆ. ಹೀಗಾಗಿ ನಾನು ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ಅನಾರೋಗ್ಯದಿಂದ ಬಳಲುತ್ತಿರುವ ನನ್ನ ಮಗನನ್ನು ನೋಡಲು ನಾನು ಪ್ರತಿವಾರ ಬೆಂಗಳೂರಿಗೆ ಆಗಮಿಸುತ್ತೇನೆ. ನನ್ನ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದೆಹಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು. ರಾಜಕೀಯ ಮಾಡುವ ಸಮಯ ಇದಲ್ಲ. ಇದು ಎಲ್ಲರೂ ಒಗ್ಗಟ್ಟಾಗಿ ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ಸಮಯ. ಈ ಹೀನ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವ ಸಮಯ. ದೇಶದ ವಿವಿಧ ಭಾಗಗಳಿಂದ ತೆರಳಿದ್ದ ಪ್ರವಾಸಿಗರಲ್ಲಿ ಶಿವಮೊಗ್ಗದ ನಿವಾಸಿ ಮಂಜುನಾಥ್ ಎಂಬುವವರು, ಬೆಂಗಳೂರು ನಿವಾಸಿ ಭೂಷಣ್ ಕೂಡ ಹತ್ಯೆಯಾಗಿದ್ದು, ಈ ಇಬ್ಬರು ಮೃತರ ಧರ್ಮಪತ್ನಿಯರೊಂದಿಗೆ ನಾನು ಇಂದು ಬೆಳಗ್ಗೆ ಮಾತನಾಡಿ ಸಾಂತ್ವನ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಕೂಡ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರ ನೇತೃತ್ವದ ತಂಡವನ್ನು ಕಾಶ್ಮೀರಕ್ಕೆ ಕಳುಹಿಸಿದ್ದು, ನಾನು ಸಂತೋಷ್ ಲಾಡ್ ಅವರ ಜತೆ ಮಾತನಾಡಿದ್ದೇನೆ. ಸಂತೋಷ್ ಲಾಡ್ ಅವರು ಮೃತರ ಕುಟುಂಬದವರು ಹಾಗೂ ಮಕ್ಕಳನ್ನು ಭೇಟಿ ಮಾಡಿದ್ದು, ಕಾಶ್ಮೀರದಲ್ಲಿ ಕರ್ನಾಟಕ ರಾಜ್ಯದಿಂದ ತೆರಳಿರುವ 200 ಪ್ರವಾಸಿಗರನ್ನು ಸಂಪರ್ಕ ಮಾಡಿದ್ದಾರೆ. ಈ ಪ್ರವಾಸಿಗರು ವಿವಿಧ ಹೋಟೇಲ್ ಗಳಿದ್ದು, ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ವಿಮಾನ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಇನ್ನು ಜಮ್ಮು ಕಾಶ್ಮೀರದ ಸಿಎಂ ಜತೆ ಚರ್ಚೆ ಮಾಡಿ ಇತರೆ ರಾಜ್ಯಗಳ ಪ್ರವಾಸಿಗರಿಗೆ ನೆರವು ನೀಡುವಂತೆ ಕೋರಿದ್ದೇನೆ. ಗೃಹ ಸಚಿವ ಅಮಿತ್ ಶಾ ಕೂಡ ಪ್ರವಾಸಿಗರ ಸುರಕ್ಷತೆ ಬಗ್ಗೆ ಗಮನಹರಿಸುವುದಾಗಿ ತಿಳಿಸಿದ್ದಾರೆ ಎಂದರು.

ಈ ದಾಳಿಯಲ್ಲಿ ಮೃತರಿಗೆ ಹಾಗೂ ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಇದು ಬೇಸಿಗೆ ಆರಂಭದ ಕಾಲ. ಹೀಗಾಗಿ ಇದು ಪ್ರವಾಸೋದ್ಯಮ ಆರಂಭವಾಗುವ ಸಮಯ. ಪ್ರವಾಸೋದ್ಯಮ ಆ ರಾಜ್ಯದ ಆರ್ಥಿಕತೆಯ ಆಧಾರ. ಕಾಶ್ಮೀರ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಈ ವರ್ಷದ ಪ್ರವಾಸೋದ್ಯಮದಿಂದ ಬರಬೇಕಾಗಿದ್ದ ಆದಾಯ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ಉಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ. ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು. ಈ ಸಮಯದಲ್ಲಿ ನಾವು ಕೇಂದ್ರ ಸರ್ಕಾರದ ಜತೆ ನಿಲ್ಲುತ್ತೇವೆ. ಭಯೋತ್ಪಾದಕ ಕೃತ್ಯವನ್ನು ಕಟುವಾಗಿ ಖಂಡಿಸುತ್ತೇವೆ. ದೇಶದ ಏಕತೆ ಹಾಗೂ ಸಮಗ್ರತೆ ರಕ್ಷಣೆಗೆ ನಾವು ಒಂದಾಗಿ ನಿಲ್ಲುತ್ತೇವೆ. ಈ ದಾಳಿ ದೇಶದ ಮೇಲಿನ ದಾಳಿಯಾಗಿದೆ. ಇಡೀ ದೇಶ ಆಘಾತಕ್ಕೆ ಒಳಗಾಗಿದ್ದು, ಪಾಕಿಸ್ತಾನ ಭಯೋತ್ಪಾದಕ ಸಂಸ್ಧೆ ಈ ದಾಳಿಯ ಹೊಣೆ ಹೊತ್ತಿದೆ. ಹೀಗಾಗಿ ನಾವು ತಕ್ಕ ತಿರುಗೇಟು ನೀಡಬೇಕು. ಈ ವಿಚಾರದಲ್ಲಿ ನಾವೆಲ್ಲರೂ ಒಂದೇ. ಆದರೆ ಈ ವಿಚಾರದಲ್ಲಿ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸದೇ ಪ್ರಚಾರವನ್ನು ಪಡೆಯಬಾರದು. ಇಂತಹ ಸಂದರ್ಭದಲ್ಲಿ ಯಾರು ಹೆಚ್ಚು ಕೆಲಸ ಮಾಡಿದರು, ಯಾರು ಮಾಡಿಲ್ಲ ಎಂಬ ಚರ್ಚೆಗಳು ಬರಬಾರದು. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಂದೇ. ಕೇಂದ್ರ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ. ಈ ಭಯೋತ್ಪಾದಕರನ್ನು ಹುಡುಕಿ ಹೊಡೆದುಹಾಕಬೇಕು. ಜಮ್ಮು ಕಾಶ್ಮೀರದ ಪ್ರವಾಸಿಗರ ವಿಶ್ವಾಸ ಗಳಿಸಬೇಕು ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *