ಮೇ,28ರಂದು ಕರ್ನಾಟಕಕ್ಕೆ ಮುಂಗಾರು ಆಗಮನ: ಈ ಬಾರಿ ದಾಖಲೆ ಮಳೆ ಸಾಧ್ಯತೆ..!

ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಒಂದು ವಾರ ಮಳೆ.

ಬೆಂಗಳೂರು: ಈ ಬಾರಿ ಬೇಸಿಗೆ ಕಾಲ ಬೇಗನೆ ಮುಗಿಯುತ್ತಿದ್ದು, 5 ದಿನ ಮುಂಚಿತವಾಗಿಯೇ ರಾಜ್ಯದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆಗಳಿವೆ ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರತಿ ಬಾರಿ ಜೂನ್ 1ಕ್ಕೆ ಮಾನ್ಸೂನ್ ಮಾರುತ ಆರಂಭವಾಗುವ ವಾಡಿಕೆ ಇತ್ತು. ಆದರೆ, ಈ ವರ್ಷ ಮೇ 27ರಂದೇ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ. ಜೂನ್ 1 ರಂದು ನೈಋತ್ಯ ಮಾರುತ ಕೇರಳವನ್ನು ಪ್ರವೇಶಿಸಿದರೆ, ಜೂನ್ 8ರೊಳಗೆ ಇಡೀ ದೇಶವನ್ನ ಆವರಿಸುತ್ತಿತ್ತು. ಆದರೆ, ಈ ಬಾರಿ 5 ದಿನ ಮುಂಚಿತವಾಗಿ ಮುಂಗಾರು ಮಳೆ ಆರಂಭವಾಗುತ್ತಿದೆ.

ಮುಂಗಾರು 5 ದಿನದ ಮುಂಚಿತವಾಗಿ ಬರುತ್ತಿರುವುದು ಕಳೆದ 16 ವರ್ಷದ ಬಳಿಕ ಇದೇ ಮೊದಲಾಗಿದೆ. 2009ರಲ್ಲಿ ಮೇ.23 ರಂದು ಇದೇ ರೀತಿಯಲ್ಲಿ ಮುಂಗಾರು 5 ದಿನಗಳ ಮುಂಚೆ ಆರಂಭವಾಗಿತ್ತು. ಈ ಬಾರಿ ಮೇ 27ರಂದು ಆರಂಭವಾಗುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮೇ.28ರಂದು ಕರ್ನಾಟಕದಲ್ಲಿ ಮುಂಗಾರು ಆಗಮನವಾಗಲಿದ್ದು, ಈ ವರ್ಷ ಸಾಮಾನ್ಯಕ್ಕಿತ ಹೆಚ್ಚಿನ ಮಳೆಯಾಗುವ ನಿರೀಕ್ಷೆಗಳಿವೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ, ಆದರೆ ,ರಾಜ್ಯದ ಇತರ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (ಕೆಎಸ್ಎನ್ಡಿಎಂಸಿ) ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರು ಹೇಳಿದ್ದಾರೆ.

ಜೂನ್ ಮತ್ತು ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದ ನಡುವೆ ಸರಾಸರಿ ಮಳೆ 860 ಮಿ.ಮೀ. ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಸಾಮಾನ್ಯಕ್ಕಿಂತ ಸುಮಾರು ಶೇ.5 ಹೆಚ್ಚು ಮಳೆಯಾಗಲಿದೆ. ಸರಾಸರಿ 900 ಮಿ.ಮೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಮುಂದಿನ ವಾರ ರಾಜ್ಯಾದ್ಯಂತ ಸಾಮಾನ್ಯ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

Leave a Reply

Your email address will not be published. Required fields are marked *