ಬೆಂಗಳೂರು: ಕರ್ನಾಟಕದಲ್ಲಿ ಎಂದಿಗೂ ಕನ್ನಡದಲ್ಲಿ ಮಾತನಾಡಲ್ಲ ಎಂದು ದರ್ಪದಿಂದ ಮಾತನಾಡಿದ್ದ ಚಂದಾಪುರ ಎಸ್ಬಿಐ ಬ್ಯಾಂಕ್ನ ಲೇಡಿ ಮ್ಯಾನೇಜರ್ ಹುದ್ದೆಯಲ್ಲಿದ್ದ ಮಹಿಳೆಯನ್ನು ರಾತ್ರೋರಾತ್ರಿ ಕರ್ನಾಟಕದಿಂದಲೇ ಎತ್ತಂಗಡಿ ಮಾಡಲಾಗಿದೆ. ಈಗಾಗಲೇ ಆ ಅಧಿಕಾರಿ ಕನ್ನಡಿಗರ ಬಳಿ ಕ್ಷಮೆ ಕೇಳಿದ್ದರೂ ಕೋಪ ತಣ್ಣಗಾಗಿಲ್ಲ. ಅಧಿಕಾರಿ ನಗುತ್ತಾ ಕಾಟಾಚಾರದಿಂದ ಕ್ಷಮೆ ಕೇಳಿದ್ದಾರೆ ಎಂದು ಮತ್ತೆ ಆಕೆಯ ವಿರುದ್ಧ ಸಿಡಿದೆದ್ದಿದ್ದಾರೆ. ಸೀದಾ ಎಸ್ಬಿಐ ಬ್ಯಾಂಕ್ಗೆ ಮುತ್ತಿಗೆ ಹಾಕುವ ಮೂಲಕ ಕನ್ನಡ ಪರ ಸಂಘಟನೆಗಳು ಬಿಸಿ ಮುಟ್ಟಿಸಿವೆ.

ಬ್ಯಾಂಕ್ನಲ್ಲಿ ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಕ್ಕೆ ನಾನು ಎಂದಿಗೂ ಕನ್ನಡದಲ್ಲಿ ಮಾತನಾಡಲ್ಲ. ಇದು ಇಂಡಿಯಾ, ಹಿಂದಿ ಅಷ್ಟೇ ಎಂದು ದರ್ಪದಿಂದ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆಗಿ ಕೂಡಲೇ ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅಲ್ಲದೆ ಆ ಬ್ಯಾಂಕ್ಗೆ ಮುತ್ತಿಗೆ ಹಾಕುತ್ತೇವೆ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದರರಿಂದ ಎಸ್ಬಿಐ ಕೂಡಲೇ ಎಚ್ಚೆತ್ತುಕೊಂಡಿದೆ. ಬ್ಯಾಂಕ್ ಆಡಳಿತ ಮಂಡಳಿಯು ಆ ಮ್ಯಾನೇಜರ್ ಅನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿದೆ. ಕರ್ನಾಟಕದಲ್ಲಿ ಕನ್ನಡ ಮಾತನಾಡಲ್ಲ ಎಂದಿದ್ದಕ್ಕೆ ಹೊರ ರಾಜ್ಯಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ನಾನು ಕರ್ನಾಟಕದಲ್ಲಿ ಎಂದಿಗೂ ಕನ್ನಡದಲ್ಲಿ ಮಾತನಾಡಲ್ಲ ಎನ್ನುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರಿಂದ ಆ ಅಧಿಕಾರಿಯಿಂದ ಕನ್ನಡದಲ್ಲೇ ಕ್ಷಮೆ ಕೇಳಿಸಿ, ಕೂಡಲೇ ಟ್ರಾನ್ಸ್ಫರ್ ಮಾಡಲಾಗಿದೆ. ಕನ್ನಡ ಮಾತನಾಡದ ಮೇಲೆ ಅವರ ಕರ್ನಾಟಕದಲ್ಲಿ ಇರುವುದು ಸರಿಯಲ್ಲ ಎಂದು ಮನಗಂಡು ರಾಜ್ಯದಿಂದಲೇ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ತಣ್ಣಗಾಗದ ಕೋಪ ವಿಡಿಯೋ ಮೂಲಕ ಕ್ಷಮೆ ಕೇಳಿದ್ದರೂ ಬ್ಯಾಂಕ್ ವಿರುದ್ಧ ಕನ್ನಡಿಗರ ಕೋಪ ತಣ್ಣಗಾಗಿಲ್ಲ. ಇಂದು ಕೂಡ ಬ್ಯಾಂಕ್ಗೆ ಮುತ್ತಿಗೆ ಯತ್ನ, ಪ್ರತಿಭಟನೆ, ರಸ್ತೆ ತಡೆ ಮೂಲಕ ಕನ್ನಡಿಗರು ಖಡಕ್ ಎಚ್ಚರಿಕೆ ನೀಡುವ ಕೆಲಸ ಮುಂದುವರಿಸಿದ್ದಾರೆ. ದರ್ಪ ತೋರಿದ ಮ್ಯಾನೇಜರ್ ವಿರುದ್ಧ ಇಂದು ಚಂದಾಪುರದ ಶಾಖೆಗೆ ತೆರಳಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಚಂದಾಪುರದ ಎಸ್ಬಿಐ ಶಾಖೆಯಲ್ಲಿ ‘ನಾನು ಕನ್ನಡ ಮಾತಾಡುವುದಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ ವೀಡಿಯೋ ನೋಡಿದೆ. ಆ ಅಧಿಕಾರಿಯ ದುರಹಂಕಾರದ ನಡತೆಯನ್ನು ನಾನು ಖಂಡಿಸುತ್ತೇನೆ. ಬ್ಯಾಂಕ್ ಅಧಿಕಾರಿಗಳು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬೇಕಾದ್ದು ಅಗತ್ಯ. ಘಟನೆಯ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ಚಂದಾಪುರದ ಎಸ್ಬಿಐ ಬ್ಯಾಂಕ್ ಶಾಖೆಯಲ್ಲಿ ‘ನಾನು ಕನ್ನಡ ಮಾತಾಡುವುದಿಲ್ಲ’ ಎಂದು ಅಧಿಕಾರಿಯೊಬ್ಬರು ತೋರಿರುವ ದುವರ್ತನೆ ಅತ್ಯಂತ ಖಂಡನೀಯ ಎಂದಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಹಾಗು ನೌಕರರು ತಾವು ಸೇವೆ ಸಲ್ಲಿಸುತ್ತಿರುವ ನೆಲದ ಭಾಷೆ, ಸಂಸ್ಕೃತಿಗೆ ಗೌರವ ಕೊಡಬೇಕು. ಸ್ಥಳೀಯ ಗ್ರಾಹಕರ ಸಂವೇದನೆಗಳಿಗೆ, ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ನಡವಳಿಕೆ ಯಾವುದೇ ಕಾರಣಕ್ಕೂ ಒಪ್ಪುವಂತದಲ್ಲ. ಗ್ರಾಹಕರಿಂದ ಬ್ಯಾಂಕ್ ಇದೆಯೇ ಹೊರತು ಬ್ಯಾಂಕ್ ನಿಂದಾಗಿ ಗ್ರಾಹಕರಲ್ಲ. ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿ ಉದ್ಯೋಗ ಗಿಟ್ಟಿಸಿಕೊಂಡಿರುವ ಸಿಬ್ಬಂದಿ ಕಸ್ಟಮರ್ ಈಸ್ ದ ಕಿಂಗ್ ಎಂಬ ವ್ಯಾವಹಾರಿಕ ಸತ್ಯವನ್ನ ಮೊದಲು ಅರಿಯಬೇಕು ಎಂದು ಕಿವಿಮಾತು ಹೇಳಿದ್ದಾರೆ. ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ಸದಸ್ಯನಾಗಿ ನಾನು ಈ ವಿಷಯವನ್ನ ಅನೇಕ ಬಾರಿ ಸಾರ್ವಜನಿಕ ವಲಯದ ಬ್ಯಾಂಕುಗಳ ಪ್ರತಿನಿಧಿಗಳು ಹಾಗೂ ಮುಖ್ಯಸ್ಥರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಇನ್ನು ಮುಂದಾದರೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಎಸ್ಬಿಐ ಹಾಗೂ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರಲ್ಲಿ ಒತ್ತಾಯಿಸುತ್ತೇನೆ ಎಂದಿದ್ದಾರೆ.