ಬೆಳಗಾವಿ: ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೂಡಾ ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟಿದೆ.

ಬೆಳಗಾವಿ ನಗರದ 25 ವರ್ಷದ ಗರ್ಭಿಣಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಸದ್ಯ ಆ ಗರ್ಭಿಣಿ ಮಹಿಳೆಗೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಡಿಹೆಚ್ಒ ಡಾ. ಈಶ್ವರ ಗಡಾದಿ ಅವರು, ‘ದೇಶದ ವಿವಿಧೆಡೆ ಕೊರೊನಾ ಕೇಸ್ಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರದಿಂದ ಮಾರ್ಗಸೂಚಿ ಬಂದಿದೆ. ಸರ್ಕಾರದ ಸೂಚನೆ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ತಲಾ 5 ಬೆಡ್ ಮೀಸಲಿಡಲಾಗಿದೆ. ಕೊರೊನಾ ವೈರಸ್ ಸಂಬಂಧ ಎಲ್ಲ ರೀತಿಯ ಮುಂಜಾಗ್ರತೆ ಕೈಗೊಳ್ಳಲಾಗಿದೆ. ವೃದ್ಧರು, ಒಂದು ವರ್ಷದ ಮಕ್ಕಳು ಹಾಗೂ ಕ್ಯಾನ್ಸರ್ ಪೀಡಿತರು ಗುಂಪಿನಲ್ಲಿ ಸೇರಬಾರದು. ಆದಷ್ಟು ಅಂತರ ಕಾಯ್ದುಕೊಳ್ಳಬೇಕು. ಕೊರೊನಾ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ತಿಳಿಸಿದರು.
ನೆರೆಯ ಮಹಾರಾಷ್ಟ್ರದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮಹಾರಾಷ್ಟ್ರದಲ್ಲಿ 56ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈಗ ಬೆಳಗಾವಿಯಲ್ಲೂ ಒಂದು ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯ ಜನರು ಭಯಭೀತರಾಗಿದ್ದಾರೆ.