ಬೆಂಗಳೂರು: ಆಟೋ ರಿಕ್ಷಾ ಖರೀದಿಸಲು ಅಜ್ಜಿ ಮನೆಯ ಚಿನ್ನಾಭರಣ ದೋಚಿದ್ದ ಮಿಥುನ್ (23) ಎಂಬ ಆರೋಪಿಯನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯಾನಂದ ಲೇಔಟ್ನ ನಿವಾಸಿ ಪುಟ್ನಂಜಮ್ಮ ಎಂಬವರು ನೀಡಿದ ದೂರಿನಂತೆ ಮೇ 6ರಂದು ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಮೊಮ್ಮಗ ಮಿಥುನ್ನನ್ನು ಬಂಧಿಸಿದ್ದಾರೆ. ಒಟ್ಟು 81 ಗ್ರಾಂ ಚಿನ್ನಾಭರಣ ಹಾಗೂ 9.44 ಲಕ್ಷ ರೂ ನಗದು ವಶಕ್ಕೆ ಪಡೆದಿದ್ದಾರೆ.
ಚಾಲಕನಾಗಿದ್ದ ಮಿಥುನ್ ಆಟೋ ರಿಕ್ಷಾ ಕೊಡಿಸುವಂತೆ ಅಜ್ಜಿ ಪುಟ್ನಂಜಮ್ಮ ಅವರಲ್ಲಿ ಸಾಕಷ್ಟು ಬಾರಿ ಕೇಳಿದ್ದಾನೆ. ಇದಕ್ಕೆ ಅವರು ಒಪ್ಪಿರಲಿಲ್ಲ. ಇದರಿಂದ ಬೇಸತ್ತು ಮನೆಯ ಬೀರುವಿನ ಕೀ ನಕಲಿಸಿದ್ದಾನೆ. ಮೇ 1ರಂದು ಹಬ್ಬದ ನಿಮಿತ್ತ ಕುಟುಂಬಸಮೇತ ಅಮೃತ್ತೂರಿನ ಹೊಸಪಳ್ಯಕ್ಕೆ ಪುಟ್ನಂಜಮ್ಮ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯ ಬೀರುವಿನಲ್ಲಿದ್ದ 10 ಲಕ್ಷ ರೂ. ನಗದು ಹಾಗೂ 125 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
81 ಗ್ರಾಂ ಚಿನ್ನಾಭರಣ, 9.44 ಲಕ್ಷ ರೂ. ನಗದು, ದ್ವಿಚಕ್ರ ವಾಹನವನ್ನು ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.