ಬೆಂಗಳೂರು: ಕನಕಪುರದ ಹಾರೋಹಳ್ಳಿಯ ಮರಳವಾಡಿಯಲ್ಲಿ ಸ್ಥಾಪನೆಯಾಗಿರುವ ನೂತನ ಕರಿಯಪ್ಪ ಕೃಷಿ ಮಹಾವಿದ್ಯಾಲಯದ ಕಟ್ಟಡಕ್ಕೆ ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. “ರೂರಲ್ ಎಜುಕೇಶನ್ ಸೊಸೈಟಿ ಉಳಿಸಿ, ಬೆಳೆಸುವುದು ನನ್ನ ಕೆಲಸ. ಜನಸಾಮಾನ್ಯರ ಮಕ್ಕಳಿಗಾಗಿ ಈ ಸಂಸ್ಥೆಯಿಂದ ಕೃಷಿ ಕಾಲೇಜು ನಿರ್ಮಾಣವಾಗಿದೆ. ಈ ಸಂಸ್ಥೆ ಬೆಂಗಳೂರು ದಕ್ಷಿಣ ಜಿಲ್ಲೆಯ ಹೆಮ್ಮೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಜಿಲ್ಲೆಯ ಹೆಸರು ಬದಲಾವಣೆಯಿಂದ ಜನಜೀವನ ಬದಲಾವಣೆ
“ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾವಣೆ ಕಾರಣಕ್ಕೆ ಏನೆಲ್ಲಾ ಬದಲಾವಣೆಯಾಗುತ್ತಿದೆ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಕೆಲವೊಬ್ಬರು ಇದನ್ನು ಟೀಕೆ ಮಾಡುತ್ತಿದ್ದಾರೆ. ಅವರುಗಳಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ನಾವು ನಮಗೆ ಇರುವ ಹೆಸರನ್ನು ಉಳಿಸಿಕೊಂಡಿದ್ದೇವೆ. ಯಾರ ಹೆಸರನ್ನು ಕಿತ್ತುಕೊಂಡಿಲ್ಲ” ಎಂದರು.
“ನಾನು ಈ ಹಿಂದೆ ಬೆಂಗಳೂರು ಗ್ರಾಮಾಂತರದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ. ಸುರೇಶ್ ಅವರು ಬೆಂಗಳೂರು ಹಾಲು ಒಕ್ಕೂಟದ ಸದಸ್ಯರಾಗಿದ್ದಾರೆ. ಸಂಸತ್ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಎಂದು ಕರೆಯಲಾಗುತ್ತದೆ. ಎಲ್ಲಿಂದ ಎಲ್ಲಿಗೆ ಹೋದರು ಅಮೇರಿಕಾ ಎನ್ನುತ್ತಾರೆ. ಅದೇ ರೀತಿ ಇದೂ ಕೂಡ ಬೆಂಗಳೂರು” ಎಂದು ಹೇಳಿದರು.