ಬೆಂಗಳೂರು : ನಾಡಿನ ಸಂತಶ್ರೇಷ್ಟರ ಸಾನ್ನಿಧ್ಯದಲ್ಲಿ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡ ಅವರಿಗೆ ಶ್ರೀ ಗಂಗ ಸಾಮ್ರಾಟ ಶ್ರಿಪುರುಷ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ತೀವ್ರ ಭಾವೋದ್ವೇಗಕ್ಕೆ ಒಳಗಾದ ದೇವೇಗೌಡರು, ತಮಗೆ ನೀಡಲಾದ ಈ ಪ್ರಶಸ್ತಿಗೆ ಸಮಸ್ತ ಕನ್ನಡಿಗರ ಪ್ರೀತಿ, ವಿಶ್ವಾಸ ಕಾರಣ ಹಾಗೂ ನನ್ನ ಬದುಕಿನುದ್ದಕ್ಕೂ ನನ್ನ ಪಾಲಿನ ಶಕ್ತಿಯಾಗಿ ಉಳಿದಿರುವ ನನ್ನ ಶ್ರೀಮತಿ ಚನ್ನಮ್ಮ ಅವರಿಗೆ ಹಾಗೂ ನನ್ನ ತಂದೆ ತಾಯಿಗೆ ನನ್ನ ಯಶಸ್ಸಿನ ಶ್ರೇಯಸ್ಸು ಸಲ್ಲಬೇಕು ಎಂದು ಹೇಳಿದರು.

ಶ್ರೀಮತಿ ಚನ್ನಮ್ಮ ಅವರು ಎಲ್ಲಾ ಹಂತದಲ್ಲಿ ನನ್ನ ಜೊತೆ ನಿಂತಿದ್ದಾರೆ. ಅನೇಕ ಕಷ್ಟಗಳ ಜೊತೆಗೆ ನನ್ನ ಗೌರವ ಉಳಿಸಿದ್ದಾರೆ. ಅವರ ಕೊಡುಗೆ ನೆನೆಸಿಕೊಳ್ಳುತ್ತೇನೆ ಎಂದು ಪತ್ನಿಯನ್ನು ನೆನೆದು ಕಣ್ಣೀರು ಹಾಕಿದ ದೇವೇಗೌಡರು, ಎಲ್ಲ ಮುಂದೆ ನಮ್ಮನ್ನು ನಿಲ್ಲುವಂತೆ ಶಕ್ತಿ ತಂದುಕೊಟ್ಟವರು ಶ್ರೀ ಬಾಲಗಂಗಾಧರ ಸ್ವಾಮೀಜಿ ಎಂದು ಗದ್ಗದಿತರಾದರು.
ನನಗೆ 93ನೇ ವಯಸ್ಸಿನಲ್ಲಿ, ಜೀವನದ ಕೊನೆ ದಿನಗಳಲ್ಲಿ ಈ ಹಂತದಲ್ಲಿ ನಿಮ್ಮ ಆಶೀರ್ವಾದ ನನಗೆ ಬಹಳ ಸಮಾಧಾನ ತಂದಿದೆ. 65 ವರ್ಷಗಳ ರಾಜಕಾರಣದಲ್ಲಿ ನನ್ನನ್ನು ಎಲ್ಲಾ ಸಮಾಜದವರು ಬೆಳೆಸಿದ್ದಾರೆ. ಯಾವುದೇ ಒಂದು ಸಮಾಜ ಅಲ್ಲ, ಎಲ್ಲರೂ ನನ್ನನ್ನು ಎತ್ತಿ ಆಡಿಸಿಕೊಂಡಿ ಬಂದಿದ್ದಾರೆ. ಪ್ರಧಾನಿಯಾಗಿ ರೈತನ ಮಗ ಕೆಲಸ ಮಾಡಿದ್ದಾನೆ. ನಾಲ್ಕು ಎಕರೆ ಜಮೀನು ಇಟ್ಟುಕೊಂಡಿದ್ದ ರೈತನ ಮಗ ಆ ಸ್ಥಾನಕ್ಕೆ ಹೋಗಬೇಕಾದರೆ ಈ ರಾಜ್ಯದ ಎಲ್ಲ ಸಮಾಜಗಳು ಸಹಾಯ ಮಾಡಿದ್ದಾರೆ. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಭಾವುಕರಾಗಿ ಹೇಳಿದರು.