ಬೆಂಗಳೂರು: ಆಗಸ್ಟ್, ಸೆಪ್ಟೆಂಬರ್ನಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಬಾಂಬ್ ಸಿಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಗಸ್ಟ್, ಸೆಪ್ಟೆಂಬರ್ನಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ನಡೆಯಲಿದೆ. ಗಾಳಿ ತಣ್ಣಗೆ ಬೀಸುತ್ತಿದೆ. ಸೆಪ್ಟೆಂಬರ್ ಕಳೀಲಿ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.
2013ರಲ್ಲಿ ಇದ್ದ ಹಾಗೆ ಸಿಎಂ ಸಿದ್ದರಾಮಯ್ಯ ಈ ಬಾರಿ ಇಲ್ಲ ಎಂಬ ಶಾಸಕರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಏನ್ ಮಾಡೋದು ಪವರ್ ಸೆಂಟರ್ಗಳು ಜಾಸ್ತಿಯಾಗಿವೆ. ಒಂದು ಎರಡು ಮೂರು ಲೆಕ್ಕಕ್ಕೆ ಇಲ್ಲದಷ್ಟು ಆಗಿವೆ. 2013 ರಿಂದ 2018ವರೆಗೆ ಒಂದೇ ಪವರ್ ಸೆಂಟರ್ ಇತ್ತು. ಹೀಗಾಗಿ ಅವರಿಗೆ ಯಾವುದೇ ಒತ್ತಡ ಇರಲಿಲ್ಲ. ಆದರೆ ಈಗ ಪವರ್ ಸೆಂಟರ್ ಜಾಸ್ತಿ ಆಗಿ ಜಂಜಾಟ ಹೆಚ್ಚಾಗಿದೆ ಎಂದರು
ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂಬ ಆರೋಪಕ್ಕೆ, ಸಿಎಂ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡುತ್ತಿದ್ದಾರೆ. ದುಡ್ಡು ಇಲ್ಲದೆ ಇದ್ದರೆ ಅನುದಾನ ಕೊಡಲು ಸಾಧ್ಯವೇ? ಅವರ ಬೇಡಿಕೆಗೆ ತಕ್ಕಂತೆ ಅನುದಾನ ಸಿಕ್ಕಿಲ್ಲ ಎಂಬ ಅಸಮಾಧಾನ ಇರಬಹುದು. ಗ್ಯಾರಂಟಿ ಯೋಜನೆಗಳನ್ನ ಕೊಟ್ಟಿರೋದ್ರಿಂದ ಆರ್ಥಿಕ ಹೊರೆ ಸರ್ಕಾರದ ಮೇಲಿದೆ ಎಂದು ಹೇಳಿದರು
ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಯಾವುದೇ ತಾರತಮ್ಯ ಇಲ್ಲ. ಆಡಳಿತ ಪಕ್ಷ ವಿರೋಧ ಪಕ್ಷ ಅಂತಾ ಯಾವುದೇ ತಾರತಮ್ಯ ಮಾಡುವುದಿಲ್ಲ. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಹಣಕಾಸನ್ನು ಒದಗಿಸುತ್ತಿದ್ದೇವೆ. ಒಬ್ಬರಿಗೆ ಹೆಚ್ಚಿಗೆ ನಿರೀಕ್ಷೆ ಇರಬಹುದು ಅದಕ್ಕೆ ತಕ್ಕಂತೆ ಆಗದೇ ಇರಬಹುದು. ಏನು ಅಭಿವೃದ್ಧಿ ಅಗುತ್ತಿಲ್ಲ. ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದರು.