ತುಮಕೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪತ್ನಿಯು ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ಬರೂ ಅಪರಾಧಿಗಳಿಗೆ ಮೂರನೇ ಅಧಿಕ ಮತ್ತು ವಿಶೇಷ ಜಿಲ್ಲಾ ಸತ್ರ ನ್ಯಾಯಾಲಯ ತಲಾ 50,000 ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಜಿಲ್ಲೆಯ ಮಧುಗಿರಿ ತಾಲೂಕಿನ ಕೋಡಿಗೆನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರ ಮೇ 12ರಂದು ಈ ಕೊಲೆ ಪ್ರಕರಣ ನಡೆದಿತ್ತು. ಆಂಜಿನಪ್ಪ ಎಂಬಾತನೇ ಕೊಲೆಯಾದ ವ್ಯಕ್ತಿ. ಆಂಜಿನಪ್ಪನ ಪತ್ನಿ ಯಶೋಧಾ (32) ಹಾಗೂ ಮಂಜುನಾಥ (28) ನಡುವೆ ಅನೈತಿಕ ಸಂಬಂಧವಿತ್ತು. ಈ ವಿಚಾರ ತಿಳಿದು ಪತಿಯು ತನ್ನ ಪತ್ನಿಯ ಜೊತೆಗೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದ. ಹೀಗಾಗಿ, ಯಶೋಧಾ ತನ್ನ ಪ್ರಿಯಕರ ಮಂಜುನಾಥನ ಜೊತೆ ಸೇರಿಕೊಂಡು ಮಧ್ಯರಾತ್ರಿ ವೇಳೆ ಆಂಜಿನಪ್ಪನನ್ನು ಕೊಲೆ ಮಾಡಿದ್ದರು ಎಂದು ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕೊಡಿಗೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಧುಗಿರಿ ಡಿವೈಎಸ್ಪಿ ಕಲ್ಲೇಶಪ್ಪ ಅವರು ತನಿಖೆ ಕೈಗೊಂಡು ಮೂರನೇ ಅಧಿಕ ಮತ್ತು ವಿಶೇಷ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಯಶೋಧಾ ಮತ್ತು ಮಂಜುನಾಥನಿಗೆ 50,000 ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಾಸಿಕ್ಯೂಷನ್ ಪರವಾಗಿ ನ್ಯಾಯವಾದಿ ಜ್ಯೋತಿ ವಾದ ಮಂಡಿಸಿದ್ದರು.