ಶಿವಮೊಗ್ಗ, : ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನಲೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಕೀಲ ವಿನೋದ ಅವರು ಸಲ್ಲಿಸಿದ್ದ ಖಾಸಗಿ ದೂರಿನ ಮೇರೆಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿತ್ತು. ಅದರಂತೆ ಇದೀಗ ಶಿವಮೊಗ್ಗ ಲೋಕಾಯುಕ್ತ ಈಶ್ವರಪ್ಪ, ಕಾಂತೇಶ್ ಹಾಗೂ ಶಾಲಿನಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು, ನಾಳೆ(ಜುಲೈ 04) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಈಶ್ವರಪ್ಪ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ನ ಆದೇಶದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಈಶ್ವರಪ್ಪ ವಿರುದ್ಧ ಸೆಕ್ಷನ್ 13(1)(d), 13(1)(e), 120(B), 420ರಡಿ ಎಫ್ಐಆರ್ ದಾಖಲಾಗಿದ್ದು, ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ಶಿವಮೊಗ್ಗ ಲೋಕಾಯುಕ್ತ ನೋಟಿಸ್ ನೀಡಿದೆ. ಆದ್ರೆ, ಈಶ್ವರಪ್ಪ ಕುಟುಂಬ ಕೇರಳ ಪ್ರವಾಸದಲ್ಲಿದೆ.
ಶಿವಮೊಗ್ಗದ ವಕೀಲ ವಿನೋದ್ ಸಲ್ಲಿಸಿದ್ದ ಖಾಸಗಿ ದೂರಿಗೆ ಸಂಬಂಧಿಸಿದಂತೆ, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕ್ರಿಮಿನಲ್ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಏಪ್ರಿಲ್ 24ರಂದು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಲೋಕಾಯುಕ್ತ ಡಿವೈಎಸ್ ಪಿ ಚಂದ್ರಶೇಖರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಇದೀಗ ಕಾನೂನು ಪರಿಣಿತರ ಅಭಿಪ್ರಾಯ ಪಡೆದ ಲೋಕಾಯುಕ್ತ ಪೊಲಿಸರು, ಎಫ್ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ.