ಬೆಂಗಳೂರು: ಬ್ಯಾಂಕ್ ಹೊರಗಡೆಯಿರುವ ಚೆಕ್ ಡೆಪಾಸಿಟ್ ಡ್ರಾಫ್ಟ್ ಬಾಕ್ಸ್ನಲ್ಲಿದ್ದ ಚೆಕ್ಗಳನ್ನು ಖದೀಮರು ಕಳ್ಳತನ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆ ಮೂಲಕ ಬೆಂಗಳೂರಿನಲ್ಲಿ ಇದೆ ಮೊದಲ ಬಾರಿಗೆ ಕಳ್ಳರು ಚೆಕ್ ಕದಿದ್ದಾರೆ. ಜೂನ್ 28, 29ರಂದು ಎಂಜಿ ರೋಡ್ ಮತ್ತು ಜಿಬಿ ನಗರ ಐಸಿಐಸಿಐ ಬ್ಯಾಂಕ್ನ ಎರಡು ಬ್ರಾಂಚ್ಗಳಲ್ಲಿ ಚೆಕ್ ಹಾಕುವ ನೆಪದಲ್ಲಿ ಬಂದು ಗ್ರಾಹಕರದ ಸುಮಾರು 50ಕ್ಕೂ ಹೆಚ್ಚು ಚೆಕ್ಗಳನ್ನು ಕಳ್ಳತನ ಮಾಡಿದ್ದಾರೆ. ಹೀಗೆ ಚೆಕ್ ಕದ್ದ ಬಳಿಕ ಕಳ್ಳರು ಹಣ ಹೇಗೆ ವಿತ್ ಡ್ರಾ ಮಾಡುತ್ತಾರೆ ಅಂತ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ.

ಬ್ಯಾಂಕ್ಗೆ ಸಾಲು ಸಾಲು ರಜೆ ಇದ್ದಾಗಲೇ ಪಕ್ಕಾ ಪ್ಲ್ಯಾನ್ ಮಾಡಿ ಖದೀಮರು ಕಳ್ಳತನ ಮಾಡಿದ್ದಾರೆ. ಘಟನೆ ಹಿನ್ನಲೆ ಈಗಾಗಲೇ ಬ್ರಾಂಚ್ ಮ್ಯಾನೇಜರ್ ದೂರು ನೀಡಿದ್ದು, ಅಶೋಕ್ ನಗರ ಹಾಗೂ ಜೆಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆಕ್ ಕದ್ದು ಏನು ಮಾಡುತ್ತಾರೆ ಗೊತ್ತಾ?
ಕದ್ದ ಚೆಕ್ ಅನ್ನು ಕೆಮಿಕಲ್ ಮೂಲಕ ಇಂಕ್ನಲ್ಲಿ ಬರೆದಿದ್ದ ಅಕ್ಷರಗಳನ್ನು ಅಳಿಸುತ್ತಾರೆ. ಈ ರೀತಿ ಮಾಡುವುದನ್ನು ಕೆಮಿಕಲ್ ವಾಶಿಂಗ್ ಅಂತ ಕರೆಯುತ್ತಾರೆ. ಕೆಮಿಕಲ್ ಮೂಲಕ ಸಹಿ ಒಂದನ್ನ ಬಿಟ್ಟು ಎಲ್ಲಾ ಅಕ್ಷರ ಅಳಿಸಲಾಗುತ್ತೆ. ಬಳಿಕ ತಮಗೆ ಬೇಕಾದ ಹೆಸರು ಬರೆದು ಹಣ ವಿತ್ ಡ್ರಾ ಮಾಡುತ್ತಾರೆ.
ಡ್ರಾಫ್ಟ್ ಬಾಕ್ಸ್ನಲ್ಲಿ ಚೆಕ್ ಹಾಕಿದವನಿಗೆ ಖಾತೆಯಿಂದ ಹಣ ಕಡಿತವಾದರೆ ತಕ್ಷಣ ಗೊತ್ತಾಗಲ್ಲ. ತಾವು ಚೆಕ್ನಲ್ಲಿ ಬರೆದು ಖಾತೆದಾರರು ಹಣ ಬಂದಿಲ್ಲ ಎಂದು ಹೇಳಿದಾಗಲೇ ವಿಚಾರ ತಿಳಿಯುತ್ತೆ.
ಬ್ಯಾಂಕ್ಗೆ ಸಾಲು ಸಾಲು ರಜೆ ಇದ್ದಾಗಲೇ ಕಳ್ಳತನ ಮಾಡಲಾಗುತ್ತದೆ. ಏಕೆಂದರೆ ಕದ್ದ ಚೆಕ್ ಅನ್ನು ಕೆಮಿಕಲ್ ಬಳಸಿ ವಾಶ್ ಮಾಡಲು ಸಮಯ ಸಿಗುತ್ತೆ. ಬ್ಯಾಂಕ್ ಓಪನ್ ಆಗುತ್ತಿದ್ದಂತೆ ಬೇರೆ ಕಡೆ ಹೋಗಿ ಹಣ ವಿತ್ ಡ್ರಾ ಮಾಡಿಕೊಳ್ಳುತ್ತಾರೆ. ದೂರು ನೀಡಿ ಬ್ಲಾಕ್ ಮಾಡುವ ಮುನ್ನವೇ ಹಣ ಖದೀಮರ ಕೈ ಸೇರಿರುತ್ತೆ. ಈ ಹಿಂದೆ ಬಿಹಾರ, ಮಹಾರಾಷ್ಟ್ರದಲ್ಲಿ ಇಂತಹ ಪ್ರಕರಣ ವರದಿಯಾಗಿತ್ತು.