ಟ್ರಿನಿಡಾಡ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಗೌರವವಾದ ‘ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬೆಗೊ’ ಪ್ರಶಸ್ತಿಯನ್ನು ನೀಡಲಾಯಿತು. ಟ್ರಿನಿಡಾಡ್ ಮತ್ತು ಟೊಬೆಗೊ ಪ್ರಧಾನಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಗುರುವಾರ ಈ ಪ್ರಶಸ್ತಿಯನ್ನು ಘೋಷಿಸಿದ್ದರು. ಟ್ರಿನಿಡಾಡ್ ಮತ್ತು ಟೊಬೆಗೊದ ಆರ್ಡರ್ ಆಫ್ ಪ್ರಶಸ್ತಿಯನ್ನು ಪಡೆದ ಮೊದಲ ವಿದೇಶಿ ನಾಯಕರೆಂಬ ಹೆಗ್ಗಳಿಕೆಗೂ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.

ಐದು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಕೆರಿಬಿಯನ್ ದ್ವೀಪ ರಾಷ್ಟ್ರಕ್ಕೆ 2 ದಿನಗಳ ಭೇಟಿಯಲ್ಲಿದ್ದಾರೆ. ಇದು ಭಾರತದ ಪ್ರಧಾನಿಯವರಿಗೆ ಬೇರೆ ದೇಶವು ನೀಡುತ್ತಿರುವ 25ನೇ ಅಂತಾರಾಷ್ಟ್ರೀಯ ಗೌರವವಾಗಿದೆ. ಪ್ರಧಾನ ಮಂತ್ರಿಯವರ ಜಾಗತಿಕ ನಾಯಕತ್ವ, ಭಾರತೀಯ ವಲಸಿಗರೊಂದಿಗಿನ ಅವರ ಆಳವಾದ ಸಂಬಂಧ ಮತ್ತು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅವರ ಮಾನವೀಯ ಪ್ರಯತ್ನಗಳನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು




