ದೇವನಹಳ್ಳಿ : ದೇವನಹಳ್ಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರ ಪರ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ನಟ ಪ್ರಕಾಶ್ ರೈ ಇದೀಗ ಸಚಿವ ಎಂಬಿ ಪಾಟೀಲ್ಗೆ ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ. ಪ್ರಕಾಶ್ ರೈ ಬೇರೆ ಕಡೆ ಹೋರಾಟ ಮಾಡಲಿ ಎಂದು ಎಂಬಿ ಪಾಟೀಲ್ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿ ವಿಡಿಯೋ ಬಿಡುಗಡೆ ಮಾಡಿರುವ ಪ್ರಕಾಶ್ ರೈ, ದೇವನಹಳ್ಳಿ ರೈತರ ಸಮಸ್ಯೆ ಬಗ್ಗೆ ಇಲ್ಲಿಯೇ ಹೋರಾಟ ಮಾಡಬೇಕು. ನಾವು ದೇಶದ ಹಲವು ಕಡೆ ಹೋರಾಟ ಮಾಡಿದ್ದೇವೆ. ತಮಿಳುನಾಡಿನ ರೈತರ ಪರ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದೇನೆ. ಪಂಜಾಬ್ನಲ್ಲಿ ರೈತರು ಹೋರಾಟ ಮಾಡಿದಾಗಲೂ ಭಾಗವಹಿಸಿದ್ದೆ. ಪ್ರಧಾನಿ ಮೋದಿಗೆ ನಿಮಗಿಂತ ಹೆಚ್ಚು ಪ್ರಶ್ನೆ ಮಾಡುವವನು ನಾನೇ ಎಂದು ಹೇಳಿದ್ದಾರೆ.

ಆಯಾ ಹೋರಾಟಗಳನ್ನು ಆಯಾ ರಾಜ್ಯಗಳಲ್ಲೇ ನಾವು ಮಾಡುತ್ತೇವೆ. ನಾವು ಯಾವ ಪಕ್ಷದವರೂ ಅಲ್ಲ, ಜನರ ಪಕ್ಷದವರು. ಜನರಿಂದ ಆಯ್ಕೆಯಾದ ಪ್ರತಿನಿಧಿಯಾಗಿ ಜವಾಬ್ದಾರಿಯಿಂದ ಮಾತನಾಡಿ. ದೇವನಹಳ್ಳಿ ರೈತರ ವಿಚಾರವಾಗಿ ಕಾನೂನು ರೀತಿ ಪರಿಹಾರ ಹುಡುಕಿ. ನಿಮ್ಮ ಕಡೆಯಿಂದ ಆಗದಿದ್ದರೆ ನಮ್ಮ ಬಳಿಯೇ ಬನ್ನಿ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಕೆಐಎಡಿಬಿ ಭೂಸ್ವಾಧೀನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯೋಚಿಸಿ. ನಮ್ಮ ಬಳಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡರಿದ್ದಾರೆ. ಅವರ ಬಳಿ ಸಲಹೆ ಕೇಳೋಣ ಎಂದು ಪ್ರಕಾಶ್ ರೈ ಹೇಳಿದ್ದಾರೆ.