ಬೆಂಗಳೂರು : ಗ್ಯಾರಂಟಿ ಯೋಜನೆಗಳಿಂದ ಜನರಲ್ಲಿ ಜಡತ್ವ ಆವರಿಸಿಕೊಳ್ಳುತ್ತಿದೆ ಎಂದು ರಂಭಾಪುರಿ ಶ್ರೀಗಳು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ, ಶ್ರೀಗಳ ಬಗ್ಗೆ ಅಪಾರವಾದ ಶ್ರದ್ಧೆ ಮತ್ತು ಗೌರವ ಇದೆ, ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ, ಅದರೆ ಸರ್ಕಾರ ದುಡಿಯುವ ವರ್ಗ, ಬಡತನದಲ್ಲಿ ಬೆಂದಿರುವ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಚರಂಡಿಗಳ ನಿರ್ಮಾಣ, ದೊಡ್ಡದೊಡ್ಡ ಕಟ್ಟಡಗಳನ್ನು ನಿರ್ಮಿಸುವುದು ಮಾತ್ರ ಅಭಿವೃದ್ಧಿ ಅಲ್ಲ, ಹಸಿದ ಹೊಟ್ಟೆಗೆ ಹೊಟ್ಟೆ ತುಂಬಾ ಅನ್ನ ನೀಡುವುದು ಸಹ ಅಭಿವೃದ್ಧಿಯ ಭಾಗವಾಗಿದೆ, ಬಡವರು ದಿನವಿಡೀ ದುಡಿದರೂ ಹೊಟ್ಟೆ ತುಂಬ ಊಟ ಕಾಣದಂಥ ಸ್ಥಿತಿಯಿರುವಾಗ ತಮ್ಮ ಸರ್ಕಾರ ಅವರಿಗೆ ಊಟ ಒದಗಿಸುವ ವ್ಯವಸ್ಥೆ ಮಾಡಿದರೆ ಅದು ತಪ್ಪೇ? ಇಂಥ ವಿಷಯಗಳನ್ನು ಅನಾವಶ್ಯಕ ಚರ್ಚೆಗೆ ಎಳೆಯಬಾರದು ಎಂದು ಸವದಿ ಹೇಳಿದರು.