ಬೆಂಗಳೂರು: ಜೈಲಿನಿಂದಲೇ ಕರ್ನಾಟಕ ಸೇರಿ ದೇಶದ ವಿವಿಧೆಡೆ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕೋಲಾರದ 5 ಕಡೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಿಎಆರ್ ಪೊಲೀಸ್ ಅಧಿಕಾರಿ ಸೇರಿ ಮೂವರು ಶಂಕಿತ ಉಗ್ರರರನ್ನ ಬಂಧಿಸಿದೆ.

ಜೈಲಿನಲ್ಲಿದ್ದುಕೊಂಡೇ ಉಗ್ರ ಕೃತ್ಯಕ್ಕೆ ಸಂಚು
2023ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೇಡ್ಗಳು ಪತ್ತೆಯಾಗಿದ್ದವು. ಜೀವಂತ ಗ್ರೆನೇಡನ್ನು ತರಲು ಟಿ.ನಾಸೀರ್ ಸೂಚಿಸಿದ್ದ. ಜುನೈದ್ ಮೂಲಕ ಇದನ್ನು ತರಿಸಿದ್ದ. ಬಳಿಕ ನಾಸೀರ್ನನ್ನು ವಶಕ್ಕೆ ಪಡೆದು ಎನ್ಐಎ ವಿಚಾರಣೆ ನಡೆಸಿತ್ತು. ಈಗಾಗಲೇ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ನಾಸೀರ್ ಜೈಲಿನಲ್ಲಿದ್ದಾನೆ. ಭಯೋತ್ಪಾದನೆ ಬಗ್ಗೆ ಯುವಜನರ ಮೈಂಡ್ ವಾಶ್ ಮಾಡೋದ್ರಲ್ಲಿ ನಿಸ್ಸೀಮನಾಗಿದ್ದ ನಾಸೀರ್, ಹಲವು ಯುವಜನರನ್ನ ಉಗ್ರ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾನೆ ಎಂದೂ ಸಹ ಎನ್ಐಎ ತನಿಖೆ ವೇಳೆ ತಿಳಿದುಬಂದಿದೆ.
ಅಲ್ಲದೇ ಜೈಲಿನಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ಪ್ಲ್ಯಾನ್ ಮಾಡಿದ್ದ. 2008ರ ಸರಣಿ ಬಾಂಬ್ ಸ್ಫೋಟ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಸೇರಿ ಹಲವು ಪ್ರಕರಣಗಳಲ್ಲಿ ನಾಸೀರ್ ಕೈವಾಡ ಇದೆ. ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ದೊಡ್ಡಮಟ್ಟದ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್ ಮಾಡಿದ್ದ ಅನ್ನೋದು ಎನ್ಐಎ ತನಿಖೆಯಲ್ಲಿ ಬಯಲಾಗಿದೆ.
ಇನ್ನೂ ಉಗ್ರ ಕೃತ್ಯಕ್ಕೆ ನಾಸೀರ್ ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಎಂಬ ಯುವಕರ ತಂಡವನ್ನೂ ರೆಡಿ ಮಾಡಿದ್ದ. ಆದ್ರೆ ಜೀವಂತ ಗ್ರೆನೇಡ್ಗಳು, ಪಿಸ್ತೂಲ್ಗಳು, ಸ್ಫೋಟಕ ವಸ್ತುಗಳ ಸಮೇತ ತಂಡ ಸಿಕ್ಕಿಬಿದ್ದಿತ್ತು. ಈ ಐವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಎನ್ಐಎ ಈ ಪ್ರಕರಣದ ಹೊಣೆ ವಹಿಸಿಕೊಂಡಿತು. ಸದ್ಯ ಮೂವರನ್ನು ಬಂಧಿಸಿರುವ ಎನ್ಐಎ, ಬಂಧಿತರಿಂದ ಒಂದಷ್ಟು ಹಣ, ಸಂವಹನಕ್ಕೆ ಬಳಸುತ್ತಿದ್ದ ವಾಕಿಟಾಕಿ ಸೇರಿ ಹಲವು ವಸ್ತುಗಳು ವಶಕ್ಕೆ ಪಡೆದುಕೊಂಡಿದೆ. ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ಏರ್ಟೆಲ್ ಮಾಜಿ ಉದ್ಯೋಗಿಗೆ ನೋಟಿಸ್
ಇನ್ನೂ ಮೂವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ತಾಲ್ಲೂಕು ಭಟ್ರಹಳ್ಳಿ ಗ್ರಾಮದ ಸತೀಶ್ ಗೌಡ ಎಂಬಾತನಿಗೆ ಎನ್ಐಎ ನೋಟಿಸ್ ನೀಡಿದೆ. ಶಂಕಿತರಿಗೆ ಸಿಮ್ ಕಾರ್ಡ್ ನೀಡಿದ ಆರೋಪದ ಮೇಲೆ ಸತೀಶ್ ಗೌಡಗೆ ನೋಟಿಸ್ ನೀಡಲಾಗಿದೆ. ಸತೀಶ್ ಮನೆಯಲ್ಲಿ ಇಲ್ಲದ ಕಾರಣ ಕಾರಣ ಕುಟುಂಬಸ್ಥರಿಗೆ ನೋಟೀಸ್ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಅಧಿಕಾರಿಗಳು. ಮೂರು ವರ್ಷಗಳ ಹಿಂದೆ ಸತೀಶ್ಗೌಡ ಏರ್ಟೆಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈ ಕೆಲಸ ಮಾಡಿರುವುದಾಗಿ ಸಂಶಯ ವ್ಯಕ್ತವಾಗಿದೆ.