ನಟ ಪ್ರಥಮ್‌ಗೆ ಜೀವಬೆದರಿಕೆ : ಇಬ್ಬರ ವಿರುದ್ಧ FIR.

ದೊಡ್ಡಬಳ್ಳಾಪುರ: ನಟ ಪ್ರಥಮ್‌ಗೆ ಜೀವ ಬೆದರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎ1 ಆರೋಪಿಯಾಗಿ ಬೇಕರಿ ರಘು ಹಾಗೂ ಎ2 ಆರೋಪಿಯಾಗಿ ಯಶಸ್ವಿನಿ ಹಾಗೂ ಇತರರ ವಿರುದ್ದ ಎಫ್‌ಐಆರ್‌ ದಾಖಲಾಗಿದೆ.

ಜುಲೈ 22ರ ಮಂಗಳವಾರ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ ಪ್ರಥಮ್ ಬಂದಿದ್ದರು. ಈ ವೇಳೆ ಪ್ರಥಮ್ ರನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಜೀವ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ನಡೆದು ಹಲವು ದಿನಗಳ ನಂತರ ಖುದ್ದು, ಪ್ರಥಮ್ ನೇರವಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ಅವರನ್ನು ಭೇಟಿಯಾಗಿ ದೂರು ನೀಡಿದ್ದರು

ಪ್ರಥಮ್ ದೂರಿನ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜೀವ ಬೆದರಿಕೆ ಹಾಕಲಾಗಿದ್ದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಜುಲೈ 22 ರಂದು ಮಹೇಶ್ ಎಂಬ ಸಿನಿಮಾ ಪ್ರೊಮೋಟರ್ ಅವರು ನನಗೆ ದೊಡ್ಡ ಬಳ್ಳಾಪುರದ ಯಲ್ಲಮ್ಮ ದೇವಸ್ಥಾನದ ಪೂಜೆಗೆ ಕರೆದಿದ್ದರು. ಪೂಜೆ ಮುಗಿಸಿ ಮಧ್ಯಾಹ್ನ ಸುಮಾರು 3:50 ಗಂಟೆಗೆ ನಾನು ವಾಪಸ್‌ ಬರುವ ವೇಳೆ ಯಶಸ್ವಿನಿ ಮತ್ತು ಬೇಕರಿ ರಘು ಹಾಗೂ ಒಂದಷ್ಟು ಅಪರಿಚಿತರು ನನ್ನ ಕಾರನ್ನು ಸುತ್ತುವರೆದು ಅಜ್ಞಾತ ಸ್ಥಳಕ್ಕೆ (ಗ್ರಾಮದ ಹೆಸರು ತಿಳಿದಿರುವುದಿಲ್ಲ. ಸ್ಥಳವನ್ನು ಗುರ್ತಿಸುತ್ತೇನೆ) ಕರೆದೊಯ್ದಿದ್ದರು. ದರ್ಶನ್ ಅವರನ್ನ ಕುರಿತು ನನ್ನ ಬಾಸ್ ಬಗ್ಗೆ, ಮಾತನಾಡಿದ್ದೀಯ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ಅವರ ಬಳಿ ಇದ್ದ ಡ್ರ್ಯಾಗರ್‌ ಮತ್ತು ಚಾಕು ತೋರಿಸಿ ಚುಚ್ಚಲು ಮುಂದಾಗಿ ಭಯಪಡಿಸಿರುತ್ತಾರೆ. ಇವರು ನನ್ನ ಬಳಿ ಗಲಾಟೆ ಮಾಡುವಾಗ, ಜೈಲಿನಲಿ.. ದರ್ಶನ್ ಜೊತೆ ಇದ್ದ ಬ್ಯಾರಕ್ ಪೋಟೋವನ್ನ ತೋರಿಸಿರುತ್ತಾರೆ. ಆ ನಂತರ ಅಲ್ಲಿಂದ ಬಹಳ ಉಪಾಯದಿಂದ ಪ್ರಾಣ ಉಳಿಸಿಕೊಂಡು ಬಂದಿದ್ದೆ ದೊಡ್ಡ ವಿಚಾರ. ಈ ವಿಚಾರವನ್ನ ನನ್ನ ಜೊತೆ ಇದ್ದ ನನ್ನ ಸ್ನೇಹಿತರಾದ ಮಹೇಶ್, ಪ್ರಮೋದ್ ಮತ್ತು ಚಾಲಕ ಪ್ರಕಾಶ್ ಇವರು ಖುದ್ದು ಮೇಲ್ಕಂಡ ವಿಚಾರಕ್ಕೆ ಸಾಕ್ಷಿಯಾಗಿರುತ್ತಾರೆ. ನನಗೆ ಜೀವ ಭಯವಿರುವುದರಿಂದ ರಕ್ಷಣೆ ನೀಡಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದರ್ಶನ್ ಫ್ಯಾನ್ ಪೇಜ್ಗಳ ವಿರುದ್ಧ ಕ್ರಮಕ್ಕೆ ಆಗ್ರಹ.
ಜುಲೈ 28 ರಿಂದ ಇಲ್ಲಿಯವರೆಗೂ ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್‌ಗಳಾದ ಡಿ ಡೈನಾಸ್ಟಿ, ಡಿ ಕಿಂಗ್ ಡಮ್, ಡಿ ಯೂನಿವರ್ಸ್ ಮತ್ತು ಡೆವಿಲ್ ಕಿಂಗ್ ಡಮ್ ಜೊತೆಗೆ 500ಕ್ಕೂ ಹೆಚ್ಚು ಪೇಜ್‌ಗಳಿಂದ ನನ್ನ ವೈಯಕ್ತಿಕ ತೇಜೋವಧೆಗೆ ಇಳಿದಿರುತ್ತಾರೆ, ಆದ್ದರಿಂದ ಇವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದಾರೆ‌

Leave a Reply

Your email address will not be published. Required fields are marked *