ತುಮಕೂರು || ಜಿಲ್ಲಾ ಕಾಂಗ್ರೆಸ್ ಒಳಬೇಗುದಿಗೆ ಬ್ರೇಕ್ ಹಾಕಿದರಾ ಸಿಎಂ…? : ಮೈತ್ರಿಯಲ್ಲೂ ಅಪಸ್ವರ

ವರದಿ: ಎಸ್.ಹರೀಶ್ ಆಚಾರ್ಯ, ತುಮಕೂರು

ತುಮಕೂರು : ಜಿಲ್ಲೆಯ ಕಾಂಗ್ರೆಸ್-ಬಿಜೆಪಿ ಪಾಳಯದಲ್ಲಿ ಘಟಾನುಘಟಿ ರಾಜಕೀಯ ನೇತಾರರಿದ್ದು, ರಾಜ್ಯ ಹಾಗೂ ಕೇಂದ್ರದಲ್ಲಿ ಪ್ರಭಾವಿಗಳೆನಿಸಿದರೂ, ಸ್ಥಳೀಯವಾಗಿ ಸ್ವಪ್ರತಿಷ್ಠೆ, ನೇಮಕ, ಕೆನಾಲ್ ಹೋರಾಟ ಮತ್ತಿತರ ವಿಷಯಗಳ ಭಿನ್ನಾಭಿಪ್ರಾಯದ ಕಾರಣಕ್ಕೆ ಪರಸ್ಪರ ಮುನಿಸು ಹೊಂದಿರುವುದು ಉಭಯ ಪಕ್ಷಗಳಲ್ಲಿರುವ ಒಳಬೇಗುದಿಗೆ ನಿದರ್ಶನವೆನಿಸಿದೆ.

ನಾಯಕರ ನಡುವಿನ ಈ ರಾಜಕೀಯ ಸಂಘರ್ಷ ಸ್ವಪಕ್ಷದ ಕಾರ್ಯಕರ್ತರುಗಳಿಗೆ ನಾವು ಯಾರ ಜೊತೆ ಗುರುತಿಸಿಕೊಳ್ಳಬೇಕು, ಯಾರ ಜೊತೆ ಗುರುತಿಸಿಕೊಳ್ಳಬಾರದು ಎಂಬ ವಿಷಯವಾಗಿ ಇಕ್ಕಟ್ಟಿಗೆ ಸಿಲುಕಿಸಿದೆ. ಇದರೊಂದಿಗೆ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಎದುರಾಗುತ್ತಿರುವ ಅಪಸ್ವರಗಳು ಮುಂದಿನ ರಾಜಕೀಯ ತಾಕಲಾಟದ ದಿಕ್ಸೂಚಿಯೆನಿಸಿದೆ.

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ವಿ.ಸೋಮಣ್ಣ ಅಭ್ಯರ್ಥಿಯಾಗುತ್ತಾರೆಂಬ ದಿನದಿಂದಲೇ ಬಿಜೆಪಿ ಪಾಳಯದಲ್ಲಿ ಅಸಮಾಧಾನದ ಹೊಗೆ ಎದ್ದಿತ್ತು. ಆ ವೇಳೆ ಖುದ್ದು ಸೋಮಣ್ಣ ಅವರೇ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮನೆಗೆ ಹೋಗಿ ಬಂದರೂ ಪ್ರಚಾರದಿಂದ ದೂರವೇ ಉಳಿದ ಜೆಸಿಎಂ ಪಕ್ಷದಿಂದ ಅಂತರವನ್ನೇ ಕಾಯ್ದುಕೊಳ್ಳುತ್ತಾ ಬಂದರು. ಕಳೆದ ತಿಂಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಪಕ್ಷಾಂತರದ ಚರ್ಚೆಗೂ ಕಾರಣವಾಗಿತ್ತು. ಈ ಕುರಿತಂತೆ ಮಾಧ್ಯಮಗಳಿಗೂ ಪ್ರತಿಕ್ರಿಯಿಸಿ  ಸಂತೆಯಲ್ಲಿ ಸಿಕ್ಕ ಮಗ ನಾನು ಯಾರು ಬೇಕಾದರೂ ಕರೆದುಕೊಂಡು ಹೋಗಬಹುದು ಎಂದು ಲಿಂಕ್ ಕೆನಾಲ್ ವಿಚಾರವಾಗಿ ತಮ್ಮ ಬೆಂಬಲಕ್ಕೆ ನಿಲ್ಲದ ಸ್ವಪಕ್ಷೀಯ ನಾಯಕರ ವಿರುದ್ಧ ಹರಿಹಾಯ್ದಿದ್ದರು.

ಮಾಧುಸ್ವಾಮಿ ಅವರ ಅಸಮಾಧಾನದ ನಡೆಯ ಬೆನ್ನಿಗೆ ಕೇಂದ್ರ ಸಚಿವ ಹಾಗೂ ತುಮಕೂರು ಸಂಸದರೂ ಆಗಿರುವ ವಿ.ಸೋಮಣ್ಣ ಅವರೊಂದಿಗೆ ಇತ್ತೀಚೆಗೆ ಸ್ಥಳೀಯ ಬಿಜೆಪಿ ನಾಯಕರು, ಮೈತ್ರಿ ಜೆಡಿಎಸ್ ಶಾಸಕರು ಅಸಮಾಧಾನಹೊಂದಿದ್ದಾರೆAಬ ಸಂಗತಿ ಸಾಕಷ್ಟು ಚರ್ಚೆಗೀಡುಮಾಡಿದೆ.

ಬಣಗಳ ಸೃಷ್ಟಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಗಲಿಗೆ- ಹೆಗಲು ಕೊಟ್ಟು ವಿ.ಸೋಮಣ್ಣ ಅವರ ಗೆಲುವಿಗೆ ಶ್ರಮಿಸಿದ್ದ ಬಿಜೆಪಿ ಶಾಸಕರು, ಮಾಜಿ ಶಾಸಕರು, ಮೈತ್ರಿ ಜೆಡಿಎಸ್ ಶಾಸಕರುಗಳೇ ಕೇಂದ್ರ ಸಚಿವರೊಂದಿಗೆ ಶೀತಲ ಸಮರಕ್ಕೆ ಮುಂದಾಗಿರುವುದು ಕಮಲ ಪಾಳಯದಲ್ಲಿ ಬಣಗಳ ಸೃಷ್ಟಿಗೆ ಕಾರಣವಾಗಿದೆ. ರಾಜ್ಯಮಟ್ಟದಲ್ಲಿ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರೊಂದಿಗೆ ಅಂತರ ಕಾಯ್ದುಕೊಂಡಿರುವ ವಿ.ಸೊಮಣ್ಣ ಅವರು ವಿಜಯೇಂದ್ರ ಎರಡ್ಮೂರು ಬಾರಿ ತುಮಕೂರಿನ ಕಾರ್ಯಕ್ರಮದಲ್ಲಿ ಬಂದರೂ ಒಟ್ಟಾಗಿ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ.

ಇದು ವಿಜಯೇಂದ್ರ ಬೆಂಬಲಿಗ ಸ್ಥಳೀಯ ಬಿಜೆಪಿ ಬಣಕ್ಕೆ ಸೋಮಣ್ಣ ಅವರ ಮೇಲೆ ಮುನಿಸಿಗೆ ಕಾರಣವಾದರೆ, ಅನುದಾನ, ಲಿಂಕ್ ಕೆನಾಲ್ ವಿಚಾರವಾಗಿ ಸೋಮಣ್ಣ ಅವರ ಬಗ್ಗೆ ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಅಸಮಾಧಾನಿತವಾಗಿದ್ದಾರೆನ್ನಲಾಗಿದೆ. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಸೋಮಣ್ಣ ಅವರು ಸಹ ಮೇಲ್ನೋಟಕಷ್ಟೇ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆಂಬ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.

ಮೈತ್ರಿ ತೊಡಕು: ಈ ನಡುವೆ ಚಿಕ್ಕನಾಯಕನಹಳ್ಳಿ ಕಾರ್ಯಕ್ರಮವೊಂದರಲ್ಲಿ ವಿ.ಸೋಮಣ್ಣ ಅವರು ನಾಗರಿಕರೊಬ್ಬರ ಮನವಿ ಸ್ವೀಕಾರದ ವೇಳೆ ನಿಮ್ಮ ಶಾಸಕರನ್ನು ಕೇಳಿ ಎಂದು ಆಡಿದ ಮಾತನ್ನೇ ಅಸ್ತçವಾಗಿಸಿಕೊಂಡು ಸುರೇಶ್‌ಬಾಬು ಹಾಗೂ ಸೋಮಣ್ಣ ಅವರ ನಡುವೆ ಸಂಬAಧ ಹಳಸಿದೆ ಎಂದು ಜಾಲತಾಣಗಳಲ್ಲಿ  ಟ್ರೋಲ್ ಮಾಡಲಾಗುತ್ತಿದೆ. ತುರುವೇಕೆರೆ ಕ್ಷೇತ್ರದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಸ್ಪರ್ಧೆ ಕುರಿತಂತೆ ಬಿಜೆಪಿ ಮಾಜಿ ಶಾಸಕ ಮಸಾಲೆ ಜಯರಾಂ ಹಾಗೂ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಆಗಲೇ ಪೈಪೋಟಿಗಿಳಿದಿರುವುದು ಮುಂದೆ ಕ್ಷೇತ್ರದ ಅಭ್ಯರ್ಥಿಯಾಗಿ ನಾನೆ ಕಣಕ್ಕಿಳಿಯುವೆ ಎಂದು ಮಸಾಲೆ ಜಯರಾಂ ಘೋಷಿಸಿದ್ದು ಸಹ ಮೈತ್ರಿಯಲ್ಲಿ ಚುನಾವಣೆಗೆ ಮೊದಲೇ ಅಪಸ್ವರಗಳಿಗೆ ನಾಂದಿಹಾಡಿದೆ.

ತುಮುಲ್ ಜಟಾಪಟಿ: ಇನ್ನೂ ಆಡಳಿತೂರೂಢ ಕಾಂಗ್ರೆಸ್ ಪಕ್ಷದಲ್ಲಿ ತುಮುಲ್ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಕಾಣಿಸಿಕೊಂಡಿದ್ದ ಜಿಲ್ಲೆಯ ಸಚಿವರು- ಗುಬ್ಬಿ ಶಾಸಕರ ನಡುವಿನ ಒಳಬೇಗುದಿ ಸಿಎಂ ಎದುರೇ ಮಂಗಳವಾರದ ಸಭೆಯಲ್ಲಿ ಬಹಿರಂಗಗೊAಡಿದೆ. ತಮ್ಮ ಪತ್ನಿ ಭಾರತಿ ಅವರನ್ನು ತುಮುಲ್ ಅಧ್ಯಕ್ಷರಾಗಲು ಬಯಸಿದ್ದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ತಮ್ಮ ಪತ್ನಿಗೆ ಅವಕಾಶ ಕೈ ತಪಿದಕ್ಕೆ ಸಚಿವರಾದ ಕೆ.ಎನ್.ರಾಜಣ್ಣ, ಡಾ.ಜಿ.ಪರಮೇಶ್ವರ ಅವರ ವಿರುದ್ಧ ತೀವ್ರ ಅಸಮಾಧಾನಿತಗೊಂಡಿದ್ದರು. ಸಚಿವರ ಸಭೆ, ಭಾಗಿಯಾದ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ಅಂತರ ಕಾಯ್ದುಕೊಳ್ಳುತ್ತಿದ್ದರು. 

ಮಂಗಳವಾರ ಸಿಎಂ ತುಮಕೂರು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರ ಸಭೆ ನಡೆಸಿದ ಸಂದರ್ಭದಲ್ಲಿ ತುಮುಲ್ ಅಧ್ಯಕ್ಷರ ನೇಮಕ ವಿವಾದವನ್ನು  ಪ್ರಸ್ತಾಪಿಸಿ ಸಚಿವರ ಮೇಲೆ ದೂರಿದÀರೆನ್ನಲಾಗಿದೆ. ದೂರಿಗೆ ಸಚಿವರಾದ ಕೆ.ಎನ್.ರಾಜಣ್ಣ, ಡಾ.ಜಿ.ಪರಮೇಶ್ವರ ಅವರು ಆಕ್ಷೇಪಿಸಿ ತುಮುಲ್ ಅಧ್ಯಕ್ಷ ಸ್ಥಾನಕ್ಕೆ ದಲಿತರಿಗೆ ಅವಕಾಶ ಮಾಡಿಕೊಟ್ಟ ಬಗ್ಗೆ ಮನವರಿಕೆ ಮಾಡಿಕೊಡಲೆತ್ನಿಸಿದ್ದಾರೆ. ಈ ವೇಳೆ ಪರಸ್ಪರ ಜಟಾಪಟಿ ಸಂದರ್ಭ ಎದುರಾದಾಗ ಸಿಎಂ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಒಂದೇ ಜಿಲ್ಲೆಯವರು ಕಾದಾಟ ಬೇಡ, ಸಮನ್ವಯದಿಂದ ಹೋಗುವಂತೆ ಸಲಹೆ ನೀಡಿ ಮುರಿದ ಮನಸ್ಸುಗಳು ಬೆಸೆಯುÄವ ಪ್ರಯತ್ನ ಮಾಡಿದ್ದಾರೆ.

ಈ ಸಂಗತಿಯನ್ನು ಬುಧವಾರ ಬೆಳಿಗ್ಗೆ ಸಿಎಂ ಸಭೆಯಲ್ಲಿ ಹಾಜರಿದ್ದ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಸುದ್ದಿಗಾರರಿಗೆ ದೃಢೀಕರಿಸಿದ್ದು ತುಮುಲ್ ಅಧ್ಯಕ್ಷರ ನೇಮಕ ವಿಚಾರಕ್ಕೆ ಮನಸ್ಸುಗಳು ಮುರಿದು ಹೋಗಿದ್ದವು. ಈ ಬಗ್ಗೆ ಸಿಎಂ ಸಭೆಯಲ್ಲಿ ಚರ್ಚೆ ಆಗಿದ್ದು ನಿಜ. ತುಮುಲ್ ಆರಂಭವಾದಾಗಿನಿOದಲೂ  ದಲಿತರು ಅಧ್ಯಕ್ಷರಾಗಿ ನೇಮಕವಾಗಿರಲಿಲ್ಲ. ಈ ಬಗ್ಗೆ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟೆವು. ಗೊಂದಲ ಬಗೆಹರಿದಿದೆ ಎಂದು ಸ್ಷಷ್ಟೀಕರಿಸಿದರು.

ಲಿಂಕ್ ಕೆನಾಲ್ ವಿಚಾರವಾಗಿಯೂ ಸಭೆಯಲ್ಲಿ ಚರ್ಚೆಯಾಗಿದ್ದು ಬಡಿಸಿಎಂ ಡಿಕೆಶಿ ಜೊತೆ ಸಭೆ ನಡೆಸಿ ಪರಿಹರಿಸಿಕೊಳ್ಳುವುದಾಗಿ ಸಿಎಂಗೇ ಹೇಳಿದ್ದಾಗಿ ಗೃಹ ಸಚಿವರು ತಿಳಿಸಿದ್ದು, ಈ ಕ್ರಮದಿಂದಾಗಿ ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್ ಸಹ ಸಮಾಧಾನಿತರಾಗಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಉಭಯ ಪಕ್ಷಗಳಲ್ಲಿರುವ ಆಂತರಿಕೆ ಬೇಗುದಿ, ಪರಿಹಾರ ಯತ್ನಗಳು ಫಲನೀಡುವುದೇ? ಅಥವಾ ಇನ್ಯಾವ ರಾಜಕೀಯ ತಿರುವುಗಳಿಗೆ ಆಸ್ಪದವಾಗುವುದು ಕಾದು ನೋಡಬೇಕಿದೆ.

ಡೈರಿ ಅಧ್ಯಕ್ಷರ ನೇಮಕಗೊಂದಲ ಬಗೆಹರಿದಿದೆ

ತುಮುಲ್ ಡೈರಿ ಅಧ್ಯಕ್ಷರ ನೇಮಕ ವಿಚಾರಕ್ಕೆ ಮನಸ್ಸುಗಳು ಮುರಿದು ಹೋಗಿದ್ದವು. ಈ ಬಗ್ಗೆ ಸಿಎಂ ಸಭೆಯಲ್ಲಿ ಚರ್ಚೆ ಆಗಿದ್ದು ನಿಜ. ತುಮುಲ್ ಆರಂಭವಾದಾಗಿನಿAದಲೂ  ದಲಿತರು ಅಧ್ಯಕ್ಷರಾಗಿ ನೇಮಕವಾಗಿರಲಿಲ್ಲ. ಈ ಬಗ್ಗೆ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟೆವು. ಗೊಂದಲ ಬಗೆಹರಿದಿದೆ.

Leave a Reply

Your email address will not be published. Required fields are marked *