ಧಾರವಾಡ || DIMHANS ಸಂಸ್ಥೆಯಲ್ಲಿ ಟೆಲಿ ಮಾನಸ್ ಸಾಧನೆ: 300 ಕ್ಕೂ ಹೆಚ್ಚು ಆತ್ಮಹ*ತ್ಯೆಗಳಿಗೆ ತಡೆ.

ಧಾರವಾಡ || DIMHANS ಸಂಸ್ಥೆಯಲ್ಲಿ ಟೆಲಿ ಮಾನಸ್ ಸಾಧನೆ: 300 ಕ್ಕೂ ಹೆಚ್ಚು ಆತ್ಮಹ*ತ್ಯೆಗಳಿಗೆ ತಡೆ.

ಧಾರವಾಡ : ಉತ್ತರ ಕರ್ನಾಟಕದ ಜನರ ಪಾಲಿನ ಮಾನಸಿಕ ಸಂಜೀವಿನಿ ಎಂದು ಕರೆಯಿಸಿಕೊಳ್ಳುವ ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ರೋಗ ವಿಜ್ಞಾನ ಸಂಸ್ಥೆ ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಕೋವಿಡ್ ನಂತರದ ದಿನಗಳಲ್ಲಿ ದೇಶದಲ್ಲಿ ಆರಂಭಿಸಲಾಗಿರುವ ಟೆಲಿ ಮಾನಸ್ ಯೋಜನೆಯಡಿ ಡಿಮ್ಹಾನ್ಸ್ ದಾಖಲೆ ಸಂಖ್ಯೆಯ ಜನರಿಗೆ ಮಾನಸಿಕ ಸಲಹೆ, ಚಿಕಿತ್ಸೆ ನೀಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಆ ಮೂಲಕ ಅನೇಕರ ಆತ್ಮಹತ್ಯೆಗಳನ್ನು ತಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ಮಗುವಿನಿಂದ ಹಿಡಿದು ವಯೋ ವೃದ್ಧರವರೆಗೂ ಮಾನಸಿಕ ಒತ್ತಡ ಸವಾಲಾಗಿದೆ. ಈ ಮಾನಸಿಕ ಒತ್ತಡ ತಡೆಯಲಾಗದೇ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದೂ ಉಂಟು. ಮಾನಸಿಕ ರೋಗಕ್ಕೆ ಪ್ರಾಥಮಿಕ ಮಟ್ಟದಲ್ಲಿ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ದೊರೆತರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂಬುದನ್ನು ಟೆಲಿ ಮಾನಸ್ ಸಾಬೀತುಪಡಿಸಿದೆ. ವಿದ್ಯಾರ್ಥಿಗಳು, ಯುವಕರು, ಮದ್ಯವ್ಯಸನಿಗಳು, ಪತಿ-ಪತ್ನಿ, ವೃದ್ಧರು ಅನೇಕ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ನಿತ್ಯ ಇಂತಹ ಸಮಸ್ಯೆ ಮತ್ತು ಒತ್ತಡಗಳಿಂದ ಬಳಲುವವರು ಟೆಲಿ ಮಾನಸ್ಗೆ ಕರೆ ಮಾಡಿ ಮನಸ್ಸು ಹಗರು ಮಾಡಿಕೊಂಡು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ರೋಗ ವಿಜ್ಞಾನ ಸಂಸ್ಥೆಯ ಟೆಲಿ ಮಾನಸ್ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 65 ಸಾವಿರಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿ, ಅವರಿಗೆ ಪರಿಹಾರ ಮಾರ್ಗಗಳನ್ನು ಒದಗಿಸಿ, ದಾಖಲೆ ಮಾಡಿದೆ.

2022 ರಲ್ಲಿ ಆರಂಭವಾಗಿದ್ದ ಟೆಲಿ ಮಾನಸ್

ಕೋವಿಡ್ ನಂತರದಲ್ಲಿ ದೇಶದಲ್ಲಿ ಸಾಕಷ್ಟು ಜನರು ಮಾನಸಿಕ ಒತ್ತಡಕ್ಕೆ ಒಳಗಾದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2022ರಲ್ಲಿ ಟೆಲಿ ಮಾನಸ್ ಎಂಬ ನೂತನ ಕಾರ್ಯಕ್ರಮ ಶುರು ಮಾಡಿತು. ದೇಶದ ಪ್ರತಿ ರಾಜ್ಯದಲ್ಲೂ ಟೆಲಿ ಮಾನಸ ಕೇಂದ್ರಗಳಿದ್ದು, ಬೆಂಗಳೂರಿನ ನಿಮ್ಹಾನ್ಸ್ ಹಾಗೂ ಧಾರವಾಡದ ಡಿಮಾನ್ಸ್ನಲ್ಲಿ ಈ ಕೇಂದ್ರಗಳು 2022ರಿಂದ ಕಾರ್ಯ ನಿರ್ವಹಿಸುತ್ತಿವೆ.

ಎರಡೂ ಕೇಂದ್ರದಡಿಯಲ್ಲಿ ಇದುವರೆಗೂ ಒಂದೂರೆ ಲಕ್ಷ ಕರೆಗಳನ್ನು ಸ್ವೀಕರಿಸಿ, ಪರಿಹಾರ ಒದಗಿಸಲಾಗಿದೆ. ಉಚಿತ ಸಹಾಯವಾಣಿ ಸಂಖ್ಯೆ 14416 ಅಥವಾ 18008914416ಕ್ಕೆ ಫೋನ್ ಮಾಡಿದರೆ ದಿನದ 24 ಗಂಟೆಯೂ ಪಾಳಿ ಪ್ರಕಾರ ಕಾರ್ಯನಿರ್ವಹಿಸುತ್ತಿರೋ 20 ಜನ ಸಿಬ್ಬಂದಿ, ಆಪ್ತ ಸಮಾಲೋಚಕರು ಕರೆ ಸ್ವೀಕರಿಸುತ್ತಾರೆ. ಕರೆ ಮಾಡುವಾಗ ಇನ್ನೊಂದು ಕರೆ ಬಂದರೂ ವೇಟಿಂಗ್ ಮೂಲಕ ನಂತರದಲ್ಲಿ ಅವರನ್ನು ಸಂಪರ್ಕಿಸುವ ವ್ಯವಸ್ಥೆಯೂ ಇದೆ.

ಟೆಲಿ ಮಾನಸ್ಗೆ ಯಾರೆಲ್ಲ ಕರೆ ಮಾಡಬಹುದು?

ವ್ಯಥೆಗೆ ಒಳಪಟ್ಟವರು, ಪರೀಕ್ಷಾ ಒತ್ತಡಕ್ಕೊಳಗಾದವರು, ಕೌಟುಂಬಿಕ ಸಮಸ್ಯೆಗೊಳಗಾದವರು, ಆತ್ಮಹತ್ಯೆ ಆಲೋಚನೆಗಳು, ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕಶಕ್ತಿ ತೊಂದರೆಯುಳ್ಳವರು, ಆರ್ಥಿಕ ಒತ್ತಡದಲ್ಲಿರುವವರು ಹಾಗೂ ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಕರೆ ಮಾಡಿ, ಪರಿಹಾರವನ್ನು ಕಂಡುಕೊಳ್ಳಬಹುದು.

ರಾತ್ರಿ ಹೊತ್ತು ಬರುತ್ತಿವೆ ಅತಿಹೆಚ್ಚು ಕರೆಗಳು

ಈ ಹಿಂದೆ ಬಂದಿರುವ ಕರೆಗಳ ಮಾಹಿತಿ ಪ್ರಕಾರ, ಹೆಚ್ಚು ರಾತ್ರಿ ಹೊತ್ತು ಕರೆಗಳು ಬರುತ್ತಿವೆ. ಈ ಕರೆಗಳ ಪೈಕಿ ಶೇ 85ರಷ್ಟು ಜನರು ಆರೋಗ್ಯ, ಶಿಕ್ಷಣ, ವೈಯಕ್ತಿಕ ಬದುಕು, ಅತ್ತೆ-ಸೊಸೆ ಜಗಳ, ಲೈಂಗಿಕ ಸಮಸ್ಯೆಗಳ ಬಗ್ಗೆ ದೂರುಗಳನ್ನು ಹೇಳಿಕೊಂಡಿದ್ದಾರೆ. ಶೇ 15ರಷ್ಟು ಜನರು ವಿವಿಧ ಚಟಗಳಿಂದ ಹೊರ ಬರುವುದು ಸೇರಿದಂತೆ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ. ಈ ಪೈಕಿ ನಾವು ಗಂಭೀರ ಸಮಸ್ಯೆಗಳಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಹೋಗುವ ಸಂಗತಿಗಳಿದ್ದರೆ, ಆಪ್ತಸಮಾಲೋಚಕರು ಈ ಕರೆಯನ್ನು ಮನೋವೈದ್ಯರಿಗೆ ವರ್ಗಾಯಿಸುತ್ತಾರೆ. ಮನೋವೈದ್ಯರು ಅವರೊಂದಿಗೆ ವಿಡಿಯೋ ಕಾಲ್ ಮಾಡಿಯಾದರೂ ಅಥವಾ ಅವರನ್ನು ಡಿಮ್ಹಾನ್ಸ್ಗೆ ಕರೆಯಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾರೆ. ಇದುವರೆಗೂ ಸುಮಾರು 300 ಆತ್ಮಹತ್ಯೆಗಳನ್ನು ತಡೆಯುವಲ್ಲಿ ಈ ಕೇಂದ್ರ ಯಶಸ್ವಿಯಾಗಿದೆ. ಇಲ್ಲಿ ಪ್ರಮುಖವಾದ ವಿಚಾರವೆಂದರೆ, ಕರೆ ಮಾಡಿದವರ ಮಾಹಿತಿ ಮಾತ್ರ ಗೌಪ್ಯವಾಗಿರುತ್ತೆ ಎಂಬುದು.

ಪ್ರತಿ ಸಮಸ್ಯೆಗೆ ಇದೆ ಪರಿಹಾರವಿದೆ ಎಂಬ ಮಹತ್ವದ ಅಂಶವನ್ನೇ ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ನಿಮ್ಹಾನ್ಸ್ ರೂಪಿಸಿರೋ ಯೋಜನೆಗೆ, ಬೆಂಗಳೂರಿನ ಐಐಐಟಿ ಸಂಸ್ಥೆ ಸಾಫ್ಟ್ವೇರ್ ತಯಾರಿಸಿಕೊಟ್ಟಿದೆ. ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದು ಯಾರೂ ಆತ್ಮಹತ್ಯೆ ಅಥವಾ ಇನ್ನಾವುದೇ ಕಠಿಣ ಕ್ರಮಕ್ಕೆ ಮುಂದಾಗದೇ ಉತ್ತಮ, ಒತ್ತಡ ರಹಿತ ಜೀವನ ನಡೆಸಬೇಕು ಎಂಬುದೇ ಈ ಕಾರ್ಯಕ್ರಮದ ಉದ್ದೇಶ. ನೆಮ್ಮದಿಯ ಜೀವನ ನಡೆಸಲು ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಮಾನಸಿಕ ಆರೋಗ್ಯ ಅನ್ನೋದನ್ನು ಜನರು ಅರ್ಥ ಮಾಡಿಕೊಂಡು, ಇಂಥ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.

Leave a Reply

Your email address will not be published. Required fields are marked *