ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳು ಪುನಶ್ಚೇತನ ಗಣಿಬಾಧಿತ ಪ್ರದೇಶಗಳಾಗಿವೆ. ಆದರೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ವಸತಿ ರಹಿತರಿಗೆ ಮನೆ, ನಿವೇಶನಗಳನ್ನು ನೀಡುವ ಪಟ್ಟಿಯನ್ನು ತಯಾರು ಮಾಡದೆ, ಮೀನಾಮೇಷ ಎಣಿಸುತ್ತಿದ್ದು, ಯಾವ ಉದ್ದೇಶಕ್ಕೆ ನಮ್ಮ ತಾಲೂಕಿಗೆ ಅನ್ಯಾಯ ಮಾಡುತ್ತಿದ್ದಾರೆ? ಪಕ್ಕದ ತಾಲೂಕಿಗೆ ಅನುದಾನ ಸೇರಿದಂತೆ ಮನೆ, ನಿವೇಶನಗಳನ್ನು ಮಂಜೂರು ಮಾಡಿದ್ದು, ಏಕೆ ನಮ್ಮಗಳ ಮೇಲೆ ತಾರತಮ್ಯ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಉತ್ತರಿಸಬೇಕು.
ದಿನಕ್ಕೊಂದು ಆದೇಶ ಹೊರಡಿಸುತ್ತಾ ನಮ್ಮಗಳ ಹಕ್ಕನ್ನು ಕಸಿದುಕೊಳ್ಳುತ್ತಿದ್ದೀರಿ. ಸ್ಥಳೀಯ ಸಾರ್ವಜನಿಕರಿಗೆ ಯಾವ ಉತ್ತರ ನೀಡಬೇಕು. ನಮ್ಮ ಭಾಗದ ಸೌಲಭ್ಯ, ಸವಲತ್ತುಗಳನ್ನು ನೀಡದೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ, ಗ್ರಾಮಸ್ಥರ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಮಲ್ಲೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಡಾ.ಅಂಬೇಡ್ಕರ್ ಸೇವಾ ಸಮಿತಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಪಂ ಸದಸ್ಯ ಮತ್ತು ಅಂಬೇಡ್ಕರ್ ಸೇವಾ ಸಮಿತಿಯ ರಾಘು ಯಗಚಿಕಟ್ಟೆ, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ 2022- 23ರಲ್ಲಿ ಸರ್ಕಾರದ ಆದೇಶದಂತೆ ಗಣಿ ಬಾಧಿತ ಪ್ರದೇಶಗಳ ಗ್ರಾಮಗಳನ್ನು ಗುರುತಿಸಿ, ವಸತಿ ರಹಿತರಿಗೆ ನಿವೇಶನ ಮತ್ತು ಮನೆಗಳನ್ನು ವಿತರಿಸುವುದು ಸೇರಿದಂತೆ ಅನುದಾನ ಮತ್ತು ಸವಲತ್ತು ವಿತರಿಸಲು ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ಅವರಿಗೆ ಸೂಚಿಸಿದ್ದರು.
ಆದರೆ 2018ರಲ್ಲಿರುವ ಪಟ್ಟಿಯಂತೆ ವಸತಿರಹಿತರ ಪಟ್ಟಿಯನ್ನು ಆಯ್ಕೆ ಮಾಡಿ ಕಳಿಸಿದರೂ, ಇದುವರೆಗೆ ಯಾವುದೇ ನಿವೇಶನ, ಮನೆಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಮುಂದುವರೆದರೆ ದಲಿತ ಪರ ಸಂಘಟನೆಗಳ ವತಿಯಿಂದ ಜಿಲ್ಲಾದ್ಯಂತ ಬೃಹತ್ ಹೋರಾಟಕ್ಕೆ ಮುಂದಾಗುತ್ತೇವೆ ಮತ್ತು ನಮ್ಮ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರುಗಳು ಸಾಮೂಹಿಕವಾಗಿ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
For More Updates Join our WhatsApp Group: